ಉಡುಪಿ: ಎಡೆಬಿಡದೆ ಸುರಿಯುತ್ತಿರುವ ಮಹಾಮಳೆಗೆ ಉಡುಪಿ ಜಿಲ್ಲೆಯಲ್ಲಿ ದಶಕಗಳಲ್ಲಿ ಕಂಡರಿಯದ ನೆರೆ ಬಂದಿದೆ.
ಉಡುಪಿ, ಬ್ರಹ್ಮಾವರ ಹಾಗೂ ಕಾಪು ತಾಲ್ಲೂಕಿನ ಹೆಚ್ಚಿನ ಗ್ರಾಮಗಳು ಜಲಾವೃತಗೊಂಡಿದ್ದು, ಶನಿವಾರ ಮಧ್ಯರಾತ್ರಿ ಅಗ್ನಿಶಾಮಕ ಸಿಬ್ಬಂದಿ, ಕೋಸ್ಟ್ಗಾರ್ಡ್ ಹಾಗೂ ಸ್ಥಳೀಯರು ದೋಣಿಗಳನ್ನು ಬಳಸಿ ಪ್ರವಾಹಕ್ಕೆ ಸಿಲುಕಿದವರನ್ನು ರಕ್ಷಣೆ ಮಾಡಿದರು. ಭಾನುವಾರ ಬೆಳಿಗ್ಗೆ ಮಂಗಳೂರಿನಿಂದ ಬಂದ ಎನ್ಡಿಆರ್ಎಫ್ ತಂಡ, ನೆರೆಯಲ್ಲಿ ಸಿಲುಕಿದ್ದ 785 ಕುಟುಂಬಗಳ 2,874 ಜನರನ್ನು ರಕ್ಷಿಸಿದೆ. ಜಿಲ್ಲೆಯಲ್ಲಿ 1,201 ಜನರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.
ಉಡುಪಿ– ಶಿವಮೊಗ್ಗ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ 169 ‘ಎ’ ರಾಷ್ಟ್ರೀಯ ಹೆದ್ದಾರಿ ಕೆಲಕಾಲ ಬಂದ್ ಆಗಿತ್ತು. ಉಡುಪಿಯ ಕೃಷ್ಣಮಠ ಹಾಗೂ ಹಿರಿಯಡ್ಕ ಸಮೀಪದ ಪುತ್ತಿಗೆ ಮಠ ಜಲಾವೃತಗೊಂಡಿವೆ.

