ದೊಡ್ಡಬಳ್ಳಾಪುರ: ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ಹುಂಡಿ ಹಣ ಎಣಿಕೆ ಸೋಮವಾರ ನಡೆಯಿತು.
ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ. ಮೂರು ತಿಂಗಳ ನಂತರ ಇಂದು ದೇವರ ಹುಂಡಿಯಲ್ಲಿ ಹಣವನ್ನು ಎಣಿಕೆ ಮಾಡಲಾಯ್ತು.
ಈ ಬಾರಿಯೂ ವಿದೇಶಿ ನೋಟುಗಳು ಹಾಗೂ ನಿಷೇಧಿತ ನೋಟುಗಳು ಸಿಕ್ಕಿವೆ. ಈ ಬಾರಿ ಹುಂಡಿಯಲ್ಲಿ ಒಟ್ಟು ರೂ 45,11,606 ಸಂಗ್ರಹವಾಗಿದೆ. ಇದರೊಂದಿಗೆ 1 ಕೆಜಿ 100 ಗ್ರಾಂ ಬೆಳ್ಳಿ, 7 ಗ್ರಾಂ 500 ಮಿಲಿ ಚಿನ್ನ ಹುಂಡಿಯಲ್ಲಿ ಸಿಕ್ಕಿದೆ. ಆಸ್ಟ್ರೇಲಿಯಾ, ಮಲೇಶಿಯಾ, ಚೈನಾ, ಸಿಂಗಾಪುರ್ ದೇಶಗಳ ನೋಟುಗಳು ಸಿಕ್ಕಿವೆ.
ಇದರೊಂದಿಗೆ ನಿಷೇಧಿತ ರೂ500 ಮುಖಬೆಲೆಯ 2 ಹಾಗೂ ರೂ1 ಸಾವಿರ ಮುಖಬೆಲೆಯ 2 ನೋಟುಗಳನ್ನು ಭಕ್ತರು ಹುಂಡಿಯಲ್ಲಿ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ.
ಕರೊನಾ ಕಾರಣ ಮೂರು ತಿಂಗಳ ನಂತರ ಹುಂಡಿಯನ್ನು ನಿಯಮಾನುಸಾರ ತೆಗೆದು ಎಣಿಸಲಾಗಿದ್ದು, ಎಣಿಕೆ ಕಾರ್ಯದಲ್ಲಿ ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳು ಭಾಗವಹಿಸಿದ್ದರು. ಮುಜರಾಯಿ ತಹಶೀಲ್ದಾರ್ ಜಿ.ಜೆ.ಹೇಮಾವತಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ, ಪ್ರಧಾನ ಅರ್ಚಕ ಗುರುರಾಜಶರ್ಮ, ಇಂಡಿಯನ್ ಓವರ್ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗದ ಸಮ್ಮುಖದಲ್ಲಿ ಹುಂಡಿ ಹಣ ಎಣಿಸಲಾಯಿತು.

