ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಹಾಗೂ ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ವತಿಯಿಂದ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೈತೋಟ ಅಭಿಯಾನ ಕಾರ್ಯಕ್ರಮಕ್ಕೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮುರುಡಯ್ಯ ಚಾಲನೆ ನೀಡಿದರು.
ಕೊಡಿಗೇಹಳ್ಳಿ ಗ್ರಾಮ ಪಂಚಾಯತಿಯ ಆವರಣದಲ್ಲಿ ಸ್ತ್ರೀಶಕ್ತಿ ಸಂಘಗಳ ಮಹಿಳಾ ಸದಸ್ಯರಿಗೆ ತಮ್ಮ ತಮ್ಮ ಮನೆಗಳ ಆವರಣದಲ್ಲಿ ಪೌಷ್ಟಿಕ ಕೈತೋಟ ನಿರ್ಮಾಣಕ್ಕೆ ಉಚಿತವಾಗಿ ಸಸಿಗಳನ್ನು ವಿತರಿಸಿ ನಂತರ ಮಾತನಾಡಿದ ಅವರು, ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಉಚಿತವಾಗಿ ತೆಂಗು ,ಮಾವು, ನಿಂಬೆ , ಕರಿಬೇವು, ಪಪ್ಪಾಯಿ ಸೇರಿದಂತೆ ಒಂದು ಕುಟುಂಬಕ್ಕೆ 15 ಸಸಿಗಳನ್ನು ವಿತರಣೆ ಮಾಡುತ್ತಿದ್ದು ಮನೆಯ ಆವರಣದಲ್ಲಿ ಕೈತೋಟ ಮಾಡಿಕೊಂಡು ಎಲ್ಲರೂ ಪೌಷ್ಟಿಕವಾದ ಹಣ್ಣು ಮತ್ತು ತರಕಾರಿಗಳನ್ನು ಮನೆಯಂಗಳದಲ್ಲಿ ಬೆಳೆದುಕೊಳ್ಳಬಹುದು ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರ್ ಮಾತನಾಡಿ, ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ. ತಮ್ಮ ತಮ್ಮ ಮನೆಯಂಗಳದಲ್ಲಿ ಸ್ಥಳಾವಕಾಶವಿದ್ದರೆ ಪೌಷ್ಟಿಕ ವಾದಂತಹ ತರಕಾರಿ ಹಣ್ಣು ನೀಡುವ ಸಸಿಗಳನ್ನು ನರೇಗಾ ಯೋಜನೆಯಡಿ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ವಿತರಿಸಲಾಗುತ್ತದೆ. ಪ್ರತಿಯೊಬ್ಬರು ಸಹ ಆರೋಗ್ಯವಂತರಾಗಿರಬೇಕು ಎಂದು ಸರ್ಕಾರ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಅದನ್ನು ಮೂರು ತಿಂಗಳು ಜೋಪಾನವಾಗಿ ಬೆಳೆಸಬೇಕು ಅಲ್ಲದೆ ಇದನ್ನು ಪಂಚಾಯಿತಿ ಮಟ್ಟದ ಅಧಿಕಾರಿಗಳು ಗಮನಿಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಜೀವಿನಿ ಎನ್.ಆರ್.ಎಲ್.ಎಂ ಯೋಜನಾಧಿಕಾರಿ ವಿನುತಾ ರಾಣಿ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಗಂಗರಾಜು, ಆಡಳಿತಾಧಿಕಾರಿ ಎಂ.ವಿ.ಪ್ರಸಾದ್ ಕಾರ್ಯದರ್ಶಿಯನ್ನು ಮುನಿರಾಜು ಮತ್ತಿತರಿದ್ದರು.

