ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2020ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು ಜಿ.ಪಿ.ಎಸ್. ಆಧಾರಿತ ಮೊಬೈಲ್ ಆ್ಯಪ್ ಬಳಸಿ ನಡೆಸುತ್ತಿದ್ದು, ಬೆಳೆಗಳ ಫೋಟೋ ಅಪ್ಲೋಡ್ ಮಾಡಿರುವುದರಲ್ಲಿ ಯಾವುದೇ ಲೋಪದೋಷಗಳು ಕಂಡು ಬಂದಲ್ಲಿ, ರೈತರು “ಬೆಳೆದರ್ಶಕ್ 2020” ಆ್ಯಪ್ನಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
ಬೆಳೆ ಸಮೀಕ್ಷೆ ಮೂಲಕ ಸಂಗ್ರಹಿಸಿದ ಬೆಳೆ ಮಾಹಿತಿಯ, ಮೇಲ್ವಿಚಾರಕರ ಮೂಲಕ ಅನುಮೋದನೆಯ ನಂತರ, ಈ ಮಾಹಿತಿಯನ್ನು ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿಗಾಗಿ, ಬೆಳೆ ವಿಮೆ ಯೋಜನೆಗಾಗಿ, ಬೆಳೆ ನಷ್ಟ ಪರಿಹಾರ ನೀಡುವ ಸಮಯದಲ್ಲಿ ಉಪಯೋಗಿಸಲಾಗುತ್ತದೆ. ಆದ್ದರಿಂದ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳನ್ನು ಸರಿಯಾಗಿ
ನಮೂದಿಸಲಾಗಿದೆಯೇ ಎಂಬುದನ್ನು “ಬೆಳೆದರ್ಶಕ 2020″ ಎಂಬ ಆ್ಯಪ್ನ್ನು ಪ್ಲೇಸ್ಟೋರ್ನಲ್ಲಿ ಡೌನ್ಲೋಡ್ (http://play.google.com/store/apps/details?id=com.crop.offcsreportskharif) ಮಾಡಿಕೊಂಡು ನೋಡಬಹುದಾಗಿರುತ್ತದೆ. ಬೆಳೆಗಳ ಫೋಟೋ ಅಪ್ಲೋಡ್ ಮಾಡಿರುವುದರಲ್ಲಿ ಯಾವುದೇ ಲೋಪದೋಷಗಳಿದ್ದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು 2020ರ ಅಕ್ಟೋಬರ್ 15 ಕೊನೆಯ ದಿನವಾಗಿರುತ್ತದೆ.
ಬೆಳೆ ದರ್ಶಕ್ ಆ್ಯಪ್ ನ ವೈಶಿಷ್ಟ್ಯತೆಗಳು: ಬೆಳೆ ದರ್ಶಕ್ ಆ್ಯಪ್ನಲ್ಲಿ ನಿಮ್ಮ ಜಮೀನಿನಲ್ಲಿ ಬೆಳೆ ಸಮೀಕ್ಷೆ ಪ್ರಕಾರ ದಾಖಲಾಗಿರುವ ಬೆಳೆ ವಿವರಗಳು ಮತ್ತು ವಿಸ್ತೀರ್ಣದ ಮಾಹಿತಿ ಪಡೆಯಬಹುದು, ಬೆಳೆ ಸಮೀಕ್ಷೆ ಸಮಯದಲ್ಲಿ ನಿಮ್ಮ ಜಮೀನಿನಲ್ಲಿ ತೆಗೆಯಲಾದ ಜಿ.ಪಿ.ಎಸ್.(GPS) ಆಧಾರಿತ ಛಾಯಾ ಚಿತ್ರಗಳನ್ನು ವೀಕ್ಷಿಸಬಹುದು, ಜಮೀನಿನ ಬೆಳೆ ಸಮೀಕ್ಷೆ ಮಾಡಿದವರ ಹೆಸರು ಮತ್ತು ಮೊಬೈಲ್ ಸಂಖ್ಯೆಯ ವಿವರ ಪಡೆಯಬಹುದು ಅಲ್ಲದೆ ನೀವು ಬೆಳೆ ಸಮೀಕ್ಷೆ ಪ್ರಕಾರ ದಾಖಲಿಸಿದ ಮಾಹಿತಿಯನ್ನು ಮೇಲ್ವಿಚಾರಣೆ ಮಾಡುವ ಅಧಿಕಾರಿಗಳು
ಅಂಗೀಕರಿಸಿದ್ದಾರೋ ಇಲ್ಲವೋ ಎಂದು ಷರಾ ಕಾಲಂನಲ್ಲಿ ತಿಳಿಯಬಹುದಾಗಿದೆ, ಒಂದು ವೇಳೆ ಬೆಳೆ ಸಮೀಕ್ಷೆ ವಿವರ ತಪ್ಪಾಗಿ ದಾಖಲಾಗಿದ್ದಲ್ಲಿ ಆಕ್ಷೇಪಣೆ ಸಲ್ಲಿಸಬಹುದು ಹಾಗೂ ಮೇಲ್ವಿಚಾರಣೆ ಮಾಡುವ ಸರ್ಕಾರಿ ಅಧಿಕಾರಿಗಳು ಆಕ್ಷೇಪಣೆ ಕುರಿತು ಏನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಯಬಹುದಾಗಿದೆ.
ಈ ರೀತಿಯಾಗಿ ದಾಖಲಾಗಿರುವ ಎಲ್ಲಾ ಆಕ್ಷೇಪಣೆಗಳನ್ನು ಸಂಬಂಧಪಟ್ಟ ಮೇಲ್ವಿಚಾರಕರಿಗೆ ತಂತ್ರಾಂಶದಲ್ಲಿ ಗುರುತಿಸಲಾಗುತ್ತದೆ, ಮೇಲ್ವಿಚಾರಕರು ಆಕ್ಷೇಪಣೆಗಳನ್ನು ಪರಿಶೀಲಿಸಿ, ಅವುಗಳನ್ನು ತುರ್ತಾಗಿ ಇತ್ಯರ್ಥಪಡಿಸುವರು. ಮೇಲ್ವಿಚಾರಕರು ಸ್ವೀಕೃತವಾಗಿರುವ ಪ್ರತಿಯೊಂದು ಆಕ್ಷೇಪಣೆಯನ್ನು ಕೂಲಂಕುಶವಾಗಿ ಪರಿಶೀಲಿಸಿ, ಈಗಾಗಲೇ ಬೆಳೆ ಸಮೀಕ್ಷೆ ದತ್ತಾಂಶದಲ್ಲಿ ಲಭ್ಯವಿರುವ ಬೆಳೆ ಮಾಹಿತಿಯೊಂದಿಗೆ ಹೋಲಿಸಿ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗುವುದು. ಬೆಳೆ ಸಮೀಕ್ಷೆ ದತ್ತಾಂಶದಲ್ಲಿ ಲಭ್ಯವಿರುವ ಬೆಳೆ ಮಾಹಿತಿಯ ಆಧಾರದ ಮೇರೆಗೆ ಇತ್ಯರ್ಥಪಡಿಸಲು ಸಾಧ್ಯವಿಲ್ಲದ ಸನ್ನಿವೇಶದಲ್ಲಿ ಮೇಲ್ವಿಚಾರಕರೇ ಖುದ್ದಾಗಿ ಮಹಜರು ದಾಖಲಿಸುವ ಮೂಲಕ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ಕೃಷಿ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

