ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಕರೊನಾ ಸೋಂಕಿತರ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿಯೇ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ.
ಕಳೆದ ಮೂರು ದಿನಗಳಿಂದಲು ತಾಲ್ಲೂಕು ಆಡಳಿತದಿಂದ ಬಿಡುಗಡೆಯಾಗುತ್ತಿರುವ ಆರೋಗ್ಯ ಮಾಹಿತಿಯಲ್ಲಿ ಹಳೇಯ ಅಂಕಿ ಅಂಶಗಳಷ್ಟೆ ಬರುತ್ತಿದ್ದು, ಉಳಿದಂತೆ ಕೋವಿಡ್-19 ಹೊಸ ಪ್ರಕರಣಗಳು ಶೂನ್ಯ ಎಂದಷ್ಟೇ ಇದೆ.
ತಾಲ್ಲೂಕು ಆಡಳಿತದಿಂದ ಶನಿವಾರ ಬಿಡುಗಡೆಯಾಗಿರುವ ಆರೋಗ್ಯ ಮಾಹಿತಿಯಂತೆ ಪ್ರಸ್ತುತ ತಾಲ್ಲೂಕಿನಲ್ಲಿ 2,047 ಮಂದಿಗೆ ಸೋಂಕು ತಗುಲಿದ್ದು,1,430 ಮಂದಿ ಗುಣಮುಖರಾಗಿದ್ದಾರೆ. 71 ಜನ ಮೃತಪಟ್ಟಿದ್ದಾರೆ. ಶನಿವಾರ ಸಂಗ್ರಹ ಮಾಡಿರುವ 197 ಜನರ ದ್ರವ ಮಾದರಿ ಬೆಂಗಳೂರಿನ ರಾಜೀವ್ಗಾಂಧಿ ಆಸ್ಪತ್ರೆಯ ಪ್ರಯೋಗಾಲಕ್ಕೆ ಕಳುಹಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
‘ಹೆರಿಗೆಗೆ ದಾಖಲು ಮಾಡಿಕೊಳ್ಳಲು ಕೋವಿಡ್ ಪರೀಕ್ಷಾ ವರದಿ ಅಗತ್ಯ ಎನ್ನುತ್ತಾರೆ.ನನ್ನ ಪತ್ನಿಯ ಗಂಟಲು ದ್ರವ ಪರೀಕ್ಷೆಗೆ ನೀಡಿ ನಾಲ್ಕು ದಿನ ಕಳೆದಿದ್ದರು ಸಹ ಇನ್ನು ವರದಿ ಬರಬೇಕು ಎನ್ನುತ್ತಲೇ ಕಾಲ ಕಳೆಯುತ್ತಿದ್ದಾರೆ. ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ನಾಲ್ಕು ಸಾವಿರ ನೀಡಬೇಕು. ಬಡವರು ಎಲ್ಲಿಂದ ಹಣ ತಂದು ಕೊಡಲು ಸಾಧ್ಯ’ ಎಂದು ಕೋವಿಡ್ ಪರೀಕ್ಷಾ ವರದಿ ಪಡೆಯಲು ಸರ್ಕಾರಿ ಆಸ್ಪತ್ರೆಗೆ ಬಂದಿದ್ದ ಚಿಕ್ಕಪೇಟೆ ನಿವಾಸಿ ಮಹದೇವ್ ಅವರು ತಮ್ಮ ಆಳಲು ತೋಡಿಕೊಂಡರು.
ಸರ್ಕಾರಿ ಆಸ್ಪತ್ರೆಯಲ್ಲಿ ರ್ಯಾಪಿಡ್ ಕಿಟ್ಗಳ ಸರಬರಾಜು ಇಲ್ಲದೆ ಕೋವಿಡ್ ಪರೀಕ್ಷೆ ಸ್ಥಗಿತಗೊಂಡಿರುವ ಕುರಿತಂತೆ ಮಂಗಳವಾರ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಅವರು ಸಹ ವಿಧಾನ ಸಭಾ ಅಧಿವೇಶನದಲ್ಲು ಪ್ರಶ್ನಿಸಿದ್ದಾರೆ.

