ದೊಡ್ಡಬಳ್ಳಾಪುರ: ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುವಲ್ಲಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಪಾತ್ರ ಮುಖ್ಯ. ಸಹಕಾರಿ ತತ್ವದ ಯಶಸ್ಸು ಹೊಂದಾಣಿಕೆಯ ಮೇಲೆ ಅವಲಂಭಿತವಾಗಿದೆ ಎಂದು ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್ಕುಮಾರ್ ಹೇಳಿದರು.
ಅವರು ಬುಧವಾರ ನಗರದ ಹಾಲು ಶೀಥಲ ಕೇಂದ್ರದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘದ ಸದಸ್ಯರಿಗೆ ವಿಶ್ವಾಸ ಮೂಡಲು ಆಡಳಿತದಲ್ಲಿ ಪಾರದರ್ಶಕತೆ ಮುಖ್ಯ. ಸಕಾಲಕ್ಕೆ ಸರ್ವ ಸದಸ್ಯರ ಸಭೆಗಳನ್ನು ನಡೆಸಿ ಲೆಕ್ಕಪತ್ರಗಳನ್ನು ಮಂಡಿಸಿಬೇಕು. ಇದರಿಂದ ಸಂಘವು ಲಾಭದಾಯಕವಾಗಿ ನಡೆಸಲು ಸಹಕಾರಿಯಾಗಲಿದೆ. ಹಾಲು ಒಕ್ಕೂಟದಿಂದ ರೈತರಿಗೆ ಸಾಕಷ್ಟು ಸೌಲಭ್ಯಗಳನ್ನು ಈಗ ನೀಡಲಾಗುತ್ತಿದೆ. ಇವುಗಳ ಬಗ್ಗೆ ಸಂಘದ ಅಧ್ಯಕ್ಷರು ಮೊದಲು ಸರಿಯಾದ ಮಾಹಿತಿ ಪಡೆದುಕೊಂಡು ಸದಸ್ಯರಿಗೆ ತಿಳಿಸಬೇಕು. ಹಾಲಿನ ಗುಣಮಟ್ಟದ ಕಡೆಗೆ ಪ್ರತಿ ದಿನವು ನಿಗಾವಹಿಸಿದಾಗ ಮಾತ್ರ ಸಂಘವು ಆರ್ಥಿಕವಾಗಿ ಸದೃಢಗೊಳ್ಳುತ್ತದೆ. ಹಾಗೆಯೇ ಸದಸ್ಯರಿಗು ಉತ್ತಮ ಬೆಲೆ ದೊರೆಯುತ್ತದೆ ಎಂದರು.
ಲಾಕ್ಡೌನ್ ನಂತರ ಹೈನುಗಾರಿಕೆ ಉದ್ಯಮದತ್ತ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಹೋಟೆಲ್, ಶುಭ ಸಮಾರಂಭಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗದೇ ಇರುವ ಹಿನ್ನೆಲೆಯಲ್ಲಿ ಹಾಲಿನ ಮಾರಾಟದಲ್ಲಿ ಕುಸಿತವಾಗಿದೆ,ಹಾಲಿನ ಉತ್ಪಾದನೆ ಮಾತ್ರ ಹೆಚ್ಚಾಗಿದೆ. ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಹಾಲಿನ ಖರೀದಿಯ ಬೆಲೆಯಲ್ಲಿ ಕಡಿಮೆ ಮಾಡಲಾಗಿದೆ. ಬೇಸಿಗೆ ಆರಂಭವಾಗುತಿದ್ದಂತೆ ಮತ್ತೆ ರೈತರಿಗೆ ನೀಡಲಾಗುವ ಹಾಲಿನ ಬೆಲೆ ಏರಿಕೆಯಾಗಲಿದೆ ಎಂದರು.
ಸಭೆಯಲ್ಲಿ ದೊಡ್ಡಬಳ್ಳಾಪುರ ಹಾಲು ಶೀಥಲ ಕೇಂದ್ರ ಶಿಬಿರ ಕಚೇರಿ ಉಪವ್ಯವಸ್ಥಾಪಕ ಡಾ.ಗೋಪಾಲಕೃಷ್ಣ,ಅಪ್ಪಕಾರನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ರಾಮಣ್ಣ, ವಿಸ್ತರಣಾಧಿಕಾರಿ ಎಂ ಅಶ್ವತ್ಥಪ್ಪ ಇದ್ದರು.

