ದೊಡ್ಡಬಳ್ಳಾಪುರ: ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ, ವಿದ್ಯುತ್ ಖಾಸಗೀಕರಣ, ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಮಾಡಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ರಾಜ್ಯದಲ್ಲಿ ರೈತ ಸಂಘಟನೆಗಳು ಕರೆ ನೀಡಿರುವ ಹೆದ್ದಾರಿ ಬಂದ್ಗೆ ಬೆಂಬಲಿಸಿ, ಸೆ.25ರಂದು ನಗರದ ಡಿ.ಕ್ರಾಸ್ ಡಾ.ರಾಜ್ಕುಮಾರ್ ವೃತ್ತದಲ್ಲಿ ಬೆಂಗಳೂರು ಹಿಂದೂಪುರ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಲು ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ನಿರ್ಧರಿಸಿವೆ.
ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ರಾಜ್ಯ ರೈತ ಸಂಘ, ಕನ್ನಡಪರ ಸಂಘಟನೆಗಳು, ದಲಿತ ಪರ ಸಂಘಟನೆಗಳ ಪದಾಕಾರಿಗಳ ಸಭೆಯಲ್ಲಿ ಮಾತನಾಡಿದ ಮುಖಂಡರು, ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡತೊಡಗಿದೆ. ಹಣವಂತರು ಹಾಗೂ ಕಾರ್ಪೋರೇಟ್ಗಳಿಗೆ ಅನುಕೂಲವಾಗಿ ರೈತರಿಗೆ ಮಾರಕವಾಗಲಿದೆ. ರೈತರು ತಮ್ಮ ಮಾರಾಟ ವ್ಯವಸ್ಥೆಯನ್ನು ಸುಗಮವಾಗಿ ರೂಪಿಸಿಕೊಂಡಿರುವ ಎಪಿಎಂಸಿ ವ್ಯವಸ್ಥೆಯು ಹೊಸ ಎಪಿಎಂಸಿ ಕಾಯ್ದೆಯಿಂದ ರೈತರ ಕೈತಪ್ಪಿ ಬಂಡವಾಳ ಶಾಹಿತಗಳ ಹಿಡತಕ್ಕೆ ಹೋಗುತ್ತದೆ ಅಂತೆಯೇ ಭೂಸುಧಾರಣಾ ಕಾಯ್ದೆ 2013 ಸಹ ರೈತರಿಂದ ಕಸಿದುಕೊಂಡು ಉಳ್ಳವರ ಪಾಲಾಗುತ್ತದೆ. ವಿದ್ಯುತ್ ಕ್ಷೇತ್ರ ಸಹ ಖಾಸಗೀರಣ ಮಾಡಲಾಗುತ್ತಿದ್ದು, ಕೇಂದ್ರ ಸರ್ಕಾರ ಇಡೀ ದೇಶವನ್ನೇ ಖಾಸಗೀಕರಣ ಮಾಡಲು ಹೊರಟು ಜರನ್ನು ಗುಲಾಮಗಿರಿಗೆ ತಳ್ಳುತ್ತಿದೆ. ಕಾರ್ಮಿಕ ಕಾಯ್ದೆ ಸಹ ಕಾರ್ಮಿಕರ ವಿರೋಧವಾಗಿದ್ದು, ಈ ಕಾಯ್ದೆಗಳು ಜಾರಿಯಾಗಲು ಬಿಡದೇ ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುವ ಅನಿವಾರ್ಯತೆ ಉಂಟಾಗಿದೆ ಎಂದು ಅಭಿಪ್ರಾಯ ಪಟ್ಟರು.
ಹೆದ್ದಾರಿ ತಡೆ: ಸಭೆಯಲ್ಲಿ ಸೆ.25ರಂದು ಬೆಳಿಗ್ಗೆ 10.30ಕ್ಕೆ ನಗರದ ಡಿ.ಕ್ರಾಸ್ನ ಡಾ.ರಾಜ್ಕುಮಾರ್ ವೃತ್ತದಲ್ಲಿ ಬೆಂಗಳೂರು ಹಿಂದೂಪುರ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು. ಸೆ.25 ರಂದು ನಡೆಯಲಿರುವ ಕರ್ನಾಟಕ ಬಂದ್ಗೆ ತಮ್ಮ ಸಂಘಟನೆಗಳ ಬೆಂಬಲವಿದ್ದು, ಮುಂದಿನ ತೀರ್ಮಾನಗಳಿಗೆ ತಮ್ಮ ಸಹಮತವಿದೆ ಎಂದು ಸಭೆಯಲ್ಲಿ ನೆರೆದಿದ್ದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು. ಇದೆ ವೇಳೆ ಬುಧವಾರ ನಿಧನರಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಗೆ ಸಂತಾಪ ಸೂಚಿಸಲಾಯಿತು.

