ದೊಡ್ಡಬಳ್ಳಾಪುರ: ಕರ್ನಾಟಕ ಸರ್ಕಾರದ ಯಕ್ಷಗಾನ ಅಕಾಡೆಮಿಯ 2018ನೇ ಸಾಲಿನ ಗೌರವ ಪ್ರಶಸ್ತಿ ಪುಸ್ಕೃತ ದೊಡ್ಡಬಳ್ಳಾಪುರ ಗಾಳಿಪಟ ಕಲಾಸಂಘದ ಅಧ್ಯಕ್ಷ ಎಸ್.ಸಿ.ಜಗದೀಶ್(87) ಗುರುವಾರ (ಸೆ.24) ರಾತ್ರಿ ನಿಧನರಾಗಿದ್ದಾರೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಗುರುವಾರ ರಾತ್ರಿ 10.30 ಕೊನೆಯುಸಿರೆಳೆದರು. ಮಡದಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆ ದೇವಾಂಗ ಮಂಡಳಿ ಮುಕ್ತಿಧಾಮದಲ್ಲಿ ಇಂದು (ಸೆ.25) 12 ಗಂಟೆ ಸುಮಾರಿಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ನಗರದ ಚೌಡೇಶ್ವರಿ ಗುಡಿ ಬೀದಿಯ ನಿವಾಸಿಗಳಾದ ಎಸ್.ಚನ್ನಪ್ಪ ಮತ್ತು ಲಕ್ಷ್ಮೀದೇವಮ್ಮ ದಂಪತಿಯ ಮಗನಾದ ಎಸ್.ಸಿ.ಜಗದೀಶ್ (87),8 ನೇ ವಯಸ್ಸಿನಲ್ಲಿಯೇ ಯಕ್ಷಗಾನ,ಬಯಲು ನಾಟಕಗಳ ಕುರಿತು ಆಸಕ್ತಿ ಬೆಳೆಸಿಕೊಂಡವರು.ತಮ್ಮ 15ನೇ ವಯಸ್ಸಿನಲ್ಲಿ ದೊಡ್ಡಬಳ್ಳಾಪುರದ ಪ್ರಸಿದ್ದ ಯಕ್ಷಗಾನ ಮಂಡಳಿಯಾದ ಶ್ರೀ ಯದ್ಗಳ್ಳಿ ಪಾಪಣ್ಣ ಭಾಗವತ ಯಕ್ಷಗಾನ ಮಂಡಳಿಯಲ್ಲಿ ಅಭಿನಯಿಸುವ ಮೂಲಕ ಬಣ್ಣದ ಬದುಕನ್ನು ಆರಂಭಿಸಿದವರಾಗಿದ್ದು, ಕರಿರಾಜ ಚರಿತ್ರೆ ಯಕ್ಷಗಾನದಲ್ಲಿ ಒಂದೇ ಪ್ರದರ್ಶನದಲ್ಲಿ ಮಂತ್ರಿ,ಸಖಿ,ಬಾಣಂತಿ ಪಾತ್ರಗಳನ್ನು ಅಭಿನಯಿಸಿ ಪ್ರಶಂಸೆಗೆ ಪಾತ್ರರದವರು.ಅಲ್ಲದೆ ಬಾಣಾಸುರ ನಾಟಕದಲ್ಲಿ ಬಾಣಸುರ ಹಾಗೂ ತಾರಾಚಂದ್ರ ನಾಟಕದಲ್ಲಿ ಚಂದ್ರ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿ ಜನ ಮೆಚ್ಚುಗೆ ಗಳಿಸಿದವರಾಗಿದ್ದರು.
ಅನಾರೋಗ್ಯಕ್ಕೆ ಈಡಾಗಿದ್ದರು ಯಕ್ಷಗಾನ ರಂಗದಲ್ಲಿ ಸಕ್ರಿಯರಾಗಿ ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಕಲಿಸುತ್ತಿದ್ದರು.ಅಲ್ಲದೆ ಗಾಳಿ ಪಟ ತಯಾರಿಸಿ ಹಾರಿಸುವ ಕಲೆಯಲ್ಲಿ ಪರಿಣಿತರಾದ ಜಗದೀಶ್,ವಿವಿಧ ಆಕಾರದ ಗಾಳಿ ಪಟಗಳನ್ನು ತಯಾರಿಸುವುದರಲ್ಲಿ ನಿಸ್ಸೀಮರು.ಇವರ ವಾಲಿ ಸುಗ್ರೀವ ಹಾಗೂ ಜೋಡಿ ಲೇಡಿಪಟಗಳನ್ನು ಮೆಚ್ಚಿ ಜಾನಪದ ತಜ್ಞ ಹೆಚ್.ಎಲ್.ನಾಗೇಗೌಡರು ಗಾಳಿಪಟದ ಅಜ್ಜರೆಂದು ಬಿರುದು ನೀಡಿ ಸನ್ಮಾನಿಸಿದ್ದಾರೆ. ಅಲ್ಲದೆ ಗಣರಾಜ್ಯೋತ್ಸವದಲ್ಲಿ ದೊಡ್ಡಬಳ್ಳಾಪುರ ನಗರಸಭೆಯಿಂದ ಸನ್ಮಾನ,ತುಮಕೂರಿನಲ್ಲಿ ನಡೆದ ಡಾ. ಹೆಚ್.ಎಲ್.ನಾಗೇಗೌಡರ ಜನ್ಮ ಶತಮಾನೋತ್ಸವದ ವೇಳೆ ನಡೆದ ರಾಜ್ಯ ಮಟ್ಟದ ಗಾಳಿಪಟ ಸ್ಪರ್ದೆಯಲ್ಲಿ ಕರ್ನಾಟಕ ಜಾನಪದ ಪರಿಷತ್ವತಿಯಿಂದ ಸನ್ಮಾನ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದಲೂ ಸನ್ಮಾನಿತರಗಿದ್ದಾರೆ.
ಇವರ ಕಲಾ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ಯಕ್ಷಗಾನ ಅಕಾಡೆಮಿಯ 2018 ನೇ ಸಾಲಿನ ಗೌರವ ಪ್ರಶಸ್ತಿ ಆಯ್ಕೆ ಮಾಡಿ. ಡಿ.9 ರಂದು ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆಯುವ 2018 ನೇ ಸಾಲಿನ ಪ್ರತಿಷ್ಟಿತ ಪರ್ತಿ ಸುಬ್ಬ ಪ್ರಶಸ್ತಿ,ಗೌರವ ಪ್ರಶಸ್ತಿ,ಹಾಗೂ ಯಕ್ಷ ಸಿರಿ ವಾರ್ಷಿಕ ಪ್ರಸಸ್ತಿ ಮತ್ತು ಪುಸ್ತಕ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಬೇಕಿತ್ತು. ಆದರೆ ಅನಾರೋಗ್ಯದ ಕಾರಣ ಕಾರ್ಯಕ್ರಮಕ್ಕೆ ತೆರಳದ ಜಗದೀಶ್ ಅವರ ಮನೆಗೆ ಬಂದು ಪ್ರಶಸ್ತಿ ನೀಡಿ ಗೌರವಿಸಿದ್ದರು.

