ದೊಡ್ಡಬಳ್ಳಾಪುರ: ಪರಿಣಾಕಾರಿಯಾಗಿ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಜಿಲ್ಲೆಯಾದ್ಯಂತ ಸ್ವಚ್ಛತಾ ಸಪ್ತಾಹ ಹಮ್ಮಿಕೊಳ್ಳಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಸಭಾಂಗಣದಲ್ಲಿಂದು ಮಲೇರಿಯಾ ವಿರೋಧಿ ಮತ್ತು ಡೆಂಗೀ ವಿರೋಧಿ ಮಾಸಾಚಾರಣೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಪಿ. ಎನ್.ರವೀಂದ್ರ ಅವರು ಮಾತನಾಡಿದರು.
ಕಟ್ಟಡಗಳ ಸುತ್ತ ಮುತ್ತ ಹಾಗೂ ನಿರ್ಮಾಣಗೊಳ್ಳುತ್ತಿರುವ ಹೊಸ ಕಟ್ಟಡದ ಮೇಲ್ಭಾಗದಲ್ಲಿ ನೀರು ನಿಲ್ಲದಂತೆ ಮಾಲೀಕರಿಗೆ ಸೂಚನೆ ನೀಡಬೇಕು. ಸೊಳ್ಳೆಗಳು ಉತ್ಪತ್ತಿಯಾಗುವ ನೀರು ನಿಂತಿರುವ ಹೊಂಡಗಳಲ್ಲಿ ಹಾಗೂ ಗಣಿಗಾರಿಕೆ ಪ್ರದೇಶದ ಹೊಂಡಗಳಲ್ಲಿ ಗಪ್ಪಿ ಮೀನು ಬಿಡಲು ಕ್ರಮವಹಿಸಬೇಕು ಎಂದ ಅವರು ಹೊಸಕೋಟೆ ತಾಲ್ಲೂಕು ಮತ್ತು ನೆಲಮಂಗಲ ತಾಲ್ಲೂಕು ಸೇರಿದಂತೆ ನಗರ ಪ್ರದೇಶದ ಹೊರ ಭಾಗದಲ್ಲಿ ಕಸದ ತುಂಬಿರುವುದು ಕಂಡು ಬಂದಿದ್ದು, ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸ್ವಚ್ಛತೆಯನ್ನು ಕಾಪಾಡಲು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಧಿಕಾರಿಗಳಿಗೆ ತಿಳಿಸಿದರು.
ಸಾರ್ವಜನಿಕರಿಗೆ ಮಲೇರಿಯಾ, ಡೆಂಗ್ಯೂ, ಚಿಕುಂಗುನ್ಯಾ ರೋಗ ನಿಯಂತ್ರಣಗಳ ಬಗ್ಗೆ ಮಾಹಿತಿ ನೀಡಬೇಕು. ಸ್ವಚ್ಛತೆ ಹಾಗೂ ನೈರ್ಮಲ್ಯದ ಬಗ್ಗೆ ತಾಲ್ಲೂಕವಾರು ನಗರಸಭೆ ಮತ್ತು ಪುರಸಭೆ ಮುಖ್ಯಸ್ಥರು ಇತರೆ ಇಲಾಖೆಯ ಸಹಯೋಗದೊಂದಿಗೆ ಜಾಗೃತಿ ಮೂಡಿಸಿ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು.
ಮನೆಗಳಲ್ಲಿ ಶೇಖರಿಸುವ ನೀರನ್ನು ವಾರಕ್ಕೊಮ್ಮೆ ಸ್ವಚ್ಛಮಾಡುವ ಜೊತೆಗೆ ನೀರಿನ ಟ್ಯಾಂಕ್ಗಳ ಮೇಲೆ ಮುಚ್ಚಳಿಕೆಯಿಂದ ಭದ್ರಗೊಳಿಸಬೇಕು. ಜನರು ವಾಸಿಸುವ ಪ್ರದೇಶಗಳ ಸುತ್ತಮುತ್ತ ಸ್ವಚ್ಛತೆಯಿಂದ ಕಾಪಾಡುವ ಮೂಲಕ ಆರೋಗ್ಯ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಧರ್ಮೇಂದ್ರ ಅವರು ಮಾತನಾಡಿ ಜಿಲ್ಲೆಯಲ್ಲಿ 3 ಮಲೇರಿಯಾ, 7 ಚಿಕ್ಕನ್ ಗುನ್ಯಾ ಹಾಗೂ 8 ಡೆಂಗ್ಯೂ ಪ್ರಕರಣ ಕಂಡು ಬಂದಿದ್ದು, ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು
ಸಭೆಯಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜು, ಜಿಲ್ಲಾ ಆರೋಗ್ಯಾಧಿಕಾರಿ ಮಂಜುಳದೇವಿ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

