ದೊಡ್ಡಬಳ್ಳಾಪುರ: ತಾಲೂಕು ಕಲಾವಿದರ ಸಂಘದ ವತಿಯಿಂದ ರಂಗಗೀತೆ ಮತ್ತು ಸಾಂಸ್ಕೃತಿಕ ಕಾರ್‍ಯಕ್ರಮಗಳು ಸಂಘದ ಕಾರ್ಯಾಲಯದಲ್ಲಿ ನಡೆಯಿತು.
ತಾಲೂಕು ಕಲಾವಿದರ ಸಂಘದ ಪ್ರಧಾನ ಕಾರ್‍ಯದರ್ಶಿ ಬಿ.ಚಂದ್ರಶೇಖರ್ ಮಾತನಾಡಿ, ಸರ್ಕಾರ ಕೊರೊನೋ ಸಮಯದಲ್ಲಿ ಕಲಾವಿದರಿಗೆ ಘೋಷಿಸಿರುವ 2 ಸಾವಿರ ರೂ ನೆರವು ಬಹಳಷ್ಟು ಕಲಾವಿದರಿಗೆ ಬಂದಿಲ್ಲ. ಕಲಾವಿದರ ಮಾಸಾಶನ ಸಹ ವಿಳಂಬವಾಗುತ್ತಿದೆ. ಇನ್ನು ಮಾಸಾಶನ ಪಡೆಯದಿರುವ ಕಲಾವಿದರು ಅರ್ಜಿ ಸಲ್ಲಿಸಿ, ಸಂದರ್ಶನಕ್ಕಾಗಿ ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ವೃತ್ತಿ ನಿರತ ಕಲಾವಿದರು ಬೇರೆ ಉದ್ಯೋಗ ಸಿಗದೇ ಸಂಕಷ್ಟದಲ್ಲಿದ್ದು, ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದರು.
ಸಂಘದ ಅಧ್ಯಕ್ಷ ಎಸ್.ರಾಮಾಂಜಿನಪ್ಪ ಮಾತನಾಡಿ, ಕೊರೊನಾ ಪರಿಣಾಮದಿಂದಾಗಿ ಕಲೆಯನ್ನು ನಂಬಿ ಬದುಕುತ್ತಿರುವ ಕಲಾವಿದರ ಬದುಕು ಇಂದು ದುಸ್ತರವಾಗುತ್ತಿದೆ. ಸಾಂಸ್ಕೃತಿಕ ಕಾರ್‍ಯಕ್ರಮಗಳು,ನಾಟಕೋತ್ಸವ, ಹರಿಕಥೆ ಮೊದಲಾದ ಕಲಾಪ್ರಕಾರಗಳನ್ನು ನಂಬಿರುವ ನೂರಾರು ಕಲಾವಿದರಿಗೆ ಇಂದು ಕಾರ್‍ಯಕ್ರಮಗಳಿಲ್ಲದೇ ಪರಿತಪಿಸುವಂತಾಗಿದೆ. ಸರ್ಕಾರ ಕಲಾವಿದರಿಗೆ ಹೆಚ್ಚಿನ ನೆರವು ನೀಡಬೇಕು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ ಮಾತನಾಡಿ, ಕೊವಿಡ್-19 ಪರಿಣಾಮ 6ತಿಂಗಳಿನಿಂದ ಕಲಾವಿದರು ಸೇರಿದಂತೆ ಎಲ್ಲಾ ವರ್ಗದ ಜನರೂ ಸಹ ತೊಂದರೆಗೀಡಾಗಿದ್ದಾರೆ. ಜನರ ಸಂಕಷ್ಟ ಕೇಳಬೇಕಾದ ಸರ್ಕಾರದ ಪ್ರತಿನಿಧಿಗಳು ಸಹ ಸೋಂಕಿನಿಂದ ಬಳಲುತ್ತಿದ್ದಾರೆ. ಅಧಿವೇಶನದ ಅವಧಿ ಸಹ ಮೊಟುಕುಗೊಳಿಸಲಾಗುತ್ತಿದೆ. ದಿನೇ ದಿನೇ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸಲು ಮುನ್ನಚ್ಚೆರಿಕೆ, ಸೂಕ್ತ ಕಾಲದಲ್ಲಿ ಚಿಕಿತ್ಸೆಯೇ ಮಾರ್ಗವಾಗಿದೆ. ಕೊವಿಡ್ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಬೇಕಾದ ಅಗತ್ಯವಿದ್ದು, ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.
ತಾಲೂಕು ಕಲಾವಿದರ ಸಂಘದ ಗೌ.ಅಧ್ಯಕ್ಷ ಎಸ್. ರಾಮಮೂರ್ತಿ, ಉಪಾಧ್ಯಕ್ಷ ರಾದ ಬಿ.ಮುನಿರಾಜು,ವೀರೇಗೌಡ, ಖಜಾಂಚಿ ಮುನಿಪಾಪಯ್ಯ ಹಿರಿಯ ಕಲಾವಿದರಾದ ಎಂ.ವೆಂಕಟರಾಜು, ಟಿ.ವಿ.ಕೃಷ್ಣಪ್ಪ,ಎನ್.ವೆಂಕಟೇಶ್ ಮೊದಲಾದವರು ಭಾಗವಹಿಸಿದ್ದರು.
ಕಾರ್‍ಯಕ್ರಮದ ಅಂಗವಾಗಿ ತಾಲೂಕಿನ ವಿವಿಧ ಕಲಾವಿದರಿಂದ ರಂಗಗೀತೆಗಳ ಗಾಯನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

