ದೊಡ್ಡಬಳ್ಳಾಪುರ: ಕನ್ನಡ ಚಿತ್ರ ರಂಗ ಸೇರಿದಂತೆ ದೇಶದ 16 ಭಾಷೆಗಳ ಚಿತ್ರ ರಂಗದಲ್ಲಿ 54 ವರ್ಷಗಳ ಕಾಲ ಸ್ವರಸಾಮ್ರಾಟರಾಗಿ ರಾರಾಜಿಸಿದ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ತಾಲ್ಲೂಕಿನ ಅವರ ಸಂಗೀತಾ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ಶೆಟ್ಟಿ ಬಣ) ವತಿಯಿಂದ ನಗರದ ಬಸ್ ನಿಲ್ದಾಣದಲ್ಲಿ ನಡೆದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ, ಬಾಲಸುಬ್ರಹ್ಮಣ್ಯಂ ಅವರು ಹಿನ್ನೆಲೆಗಾಯಕರು, ನಟರಾಗಿಯಷ್ಟೇ ನೆನಪಿನಲ್ಲಿ ಉಳಿಯದೆ ಅವರೊಬ್ಬ ಮಾನವೀಯ ಮೌಲ್ಯಗಳ ಮನುಷ್ಯರಾಗಿ ಸದಾ ಜನಮಾಸದಲ್ಲಿ ಉಳಿಯುತ್ತಾರೆ. ಈ.ಟಿ.ವಿ ಕನ್ನಡ ವಾಹಿತಿಯಲ್ಲಿ ಪ್ರಸಾರವಾಗುತ್ತಿದ್ದ ‘ಎದೆತುಂಬಿ ಹಾಡುವೆ’ ರೀಯಾಲಿಟಿ ಶೋ ಮೂಲಕ ಸಾವಿರಾರು ಜನ ಹಿನ್ನೆಲೆಗಾಯಕರಿಗೆ ಗುರುಗಳಾಗಿ ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದರು.
ನಕ್ಕರೆ ಅದೆ ಸ್ವರ್ಗ ಚಿತ್ರದ ಮೂಲಕ ಕನ್ನಡ ಚಿತ್ರಗಳಲ್ಲಿ ಹಾಡಲು ಪ್ರಾರಂಭಿಸಿದ ಬಾಲಸುಬ್ರಹ್ಮಣ್ಯಂ ಅವರು ಸುಮಾರು ನಾಲ್ಕು ತಲೆಮಾರುಗಳ ಜನರನ್ನು ಗಾಡವಾಗಿ ಪ್ರಭಾವಿಸಿದ ಗಾಯಕರು. 2016ರಲ್ಲಿ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಕಾರೋತ್ಸವ ಸಹ ಮಾಡಿಸಿದ್ದರು. ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಂದವರೊಂದಿಗೆ ಬೇಸರ ಮಾಡಿಕೊಳ್ಳದೆ ಫೋಟೋ ತೆಗೆಸಿಕೊಂಡು ಪ್ರೀತಿಯಿಂದ ಮಾತನಾಡಿದ್ದನ್ನು ನೋಡುತ್ತಿದ್ದರೆ ಇವರು 16 ಭಾಷೆಗಳಲ್ಲಿ ಹಾಡುಗಳನ್ನು ಹಾಡಿರುವ ಗಾಯಕರ ಎನ್ನುವ ದೊಡ್ಡ ವ್ಯಕ್ತಿಯಂತೆ ವರ್ತಿಸದೆ ಜನಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಮಾತನಾಡುತ್ತಿದ್ದರು ಎಂದರು.
ಬಾಲಸುಬ್ರಹ್ಮಣ್ಯಂ ಅವರಿಂದ ನಮ್ಮೂರಿನಲ್ಲಿ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಸಬೇಕು. ಯುವ ಗಾಯಕರು ಅವರನ್ನು ಹತ್ತಿರದಿಂದ ನೋಡಿ ಸಂಗೀತ ಕಲಿಯುವ ಸ್ಪೂರ್ತಿ ಮೂಡುವಂತೆ ಮಾಡಬೇಕು ಎನ್ನುವ ಆಲೋಚನೆ ಇತ್ತು. ಲಾಕ್ಡೌನ್ನಿಂದಾಗಿ ಮುಂದಕ್ಕೆ ಹೋಗಿತ್ತು ಎಂದು ಹೇಳಿದ ಸಂಸ್ಕೃತಿ ಟ್ರಸ್ಟ್ ಅಧ್ಯಕ್ಷ ಎಚ್.ಎಸ್.ನಾಗೇಶ್, ಬಾಲಸುಬ್ರಹ್ಮಣ್ಯಂ ಅವರಂತಹ ಗಾಯಕರು ಶತಮಾನಗಳಿಗೆ ಒಬ್ಬರನ್ನು ಮಾತ್ರ ನೋಡಲು ಸಾಧ್ಯ ಎಂದುರು.

