ದೊಡ್ಡಬಳ್ಳಾಪುರ: ಗ್ರಾಮೀಣ ಭಾರತವನ್ನು ಸಶಕ್ತಗೊಳಿಸಲು ಎಲ್ ಆಂಡ್ ಟಿ ಕಂಪನಿ ಸಾಮಾಜಿಕ ಜವಾಬ್ದಾರಿ ನೆರವಿನ ಹಣದಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಲಾರ್ಸನ್ ಅಂಡ್ ಟಾಬ್ರೋ ಕಂಪನಿ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅರವಿಂದ್ ಕೆ.ಗರ್ಗ್ ಹೇಳಿದರು.
ಅವರು ತಾಲ್ಲೂಕಿನ ಬೀಡಿಕೆರೆ ಗ್ರಾಮದಲ್ಲಿ ಎಲ್ ಆಂಡ್ ಟಿ ಕಂಪನಿ ಹಾಗೂ ರೋಟರಿ ಸಂಸ್ಥೆ ಸಂಯುಕ್ತವಾಗಿ ಸರ್ಕಾರಿ ಶಾಲೆಯಲ್ಲಿ ನಿರ್ಮಿಸಿರುವ ಕೊಠಡಿಗಳ ಉದ್ಘಾಟನೆ, ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಬೆಂಗಳೂರಿನ ಜಕ್ಕೂರು ಕೆರೆಯನ್ನು ಜನರ ಸಹಭಾಗಿತ್ವದಲ್ಲಿ ಉತ್ತಮವಾಗಿ ಅಭಿವೃದ್ಧಿಪಡಿಸಲಾಗಿದೆ. ಜಕ್ಕೂರು ಕೆರೆಯನ್ನು ಜನರಿಗಷ್ಟೇ ಉಪಯೋಗವಾಗುವಂತೆ ಮಾಡದೆ ಪ್ರಾಣಿ, ಪಕ್ಷಿಗಳಿಗು ಉಪಯೋಗವಾಗುವ ರೀತಿಯಲ್ಲಿ ಪುನರುಜ್ಜೀವನಗೊಳಿಸಲಾಗಿದೆ. ಈ ಕೆರೆಯ ಕೆಲಸ ನಮ್ಮ ಕಂಪನಿಗೆ ಮಾತ್ರ ಹೆಸರು ತಂದುಕೊಡದೆ ಈ ಕೆಲಸದಲ್ಲಿ ಭಾಗಿಯಾದ ಎಲ್ಲರಿಗೂ ವೈಯಕ್ತಿವಾಗಿ ತೃಪ್ತಿ ನೀಡಿದೆ. ಇದೇ ರೀತಿ ಬೀಡಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಡಿಸಲಾಗಿರುವ ಕೆಲಸಗಳು ಉತ್ತಮವಾಗಿವೆ ಎಂದರು.
ಬೆಂಗಳೂರಿನ ರೋಟರಿ ಕ್ಲಬ್ ಗರ್ವನರ್ ಬಿ.ಎಲ್.ನಾಗೇಂದ್ರಪ್ರಸಾದ್ ಮಾತನಾಡಿ, ಖಾಸಗಿ ಕಂಪನಿಗಳು ತಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಲಸ ಮಾಡಲು ಉತ್ಸುಕವಾಗಿವೆ. ಆದರೆ ಸರ್ಕಾರದ ವಿವಿಧ ಇಲಾಖೆಗಳಿಂದ ಸೂಕ್ತ ಸಮಯದಲ್ಲಿ ಅನುಮತಿ, ಸ್ಪದನೆ ದೊರೆಯುತ್ತಿಲ್ಲ. ಕೆಲವರು ಮಾತ್ರ ಉತ್ತಮವಾಗಿ ಸ್ಪಂಧಿಸುತ್ತಾರೆ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಸಮಯದ ಮಿತಿಯಲ್ಲಿ ಕೆಲಸಗಳು ನಡೆಯಬೇಕು. ಆಗ ಮಾತ್ರ ಕೆಲಸ ಮಾಡುವ ಉತ್ಸಾಹ ಇರುತ್ತದೆ ಎಂದರು.
ರೋಟರಿ ಕ್ಲಬ್ ಶಿಕ್ಷಣ, ಪರಿಸರಕ್ಕೆ ಪ್ರಥಮ ಆದ್ಯತೆಯನ್ನು ನೀಡುತ್ತಿದೆ. ಈ ವರ್ಷ ಪರಿಸರ ಅಭಿವೃದ್ಧಿ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಲಾಗುತ್ತಿದೆ. ಕೆಎಂಎಫ್ ಸಹಯೋಗೊಂದಿಗೆ ರೋಟರಿ ಕ್ಲಬ್ ‘ಗ್ರಾಮ ಲಕ್ಷ್ಮೀ ಯೋಜನೆ’ಯನ್ನು ಜಾರಿಗೆ ತಂದಿದೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವಉದ್ಯೋಗಕ್ಕೆ ಅಗತ್ಯ ಇರುವ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು. ರೈತ ಮಹಿಳೆಯರಿಗೆ ಹಸುಗಳನ್ನು ಸಾಕಲು ಕೊಡಿಸುವ ಮೂಲಕ ಸ್ವಾವಲಂಬಿಗಳಾಗಲು ಉತ್ತೇಜನ ನೀಡಲಾಗುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ತರಲಾಗುತ್ತಿದೆ. ಇದೇ ರೀತಿ ಮಹಿಳೆಯರು ಸ್ವಯಂ ಉದ್ಯೋಗಗಳನ್ನು ಕೈಗೊಳ್ಳಲು ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದರು.
ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬೈಯ್ಯಪ್ಪರೆಡ್ಡಿ, ಲಾರ್ಸನ್ ಅಂಡ್ ಟಾಬ್ರೋ ಕಂಪನಿ ಮುಖ್ಯ ಕಾರ್ಯನಿರ್ವಾಹಕ ಡಿ.ಕೇಶವಕುಮಾರ್, ಎಚ್.ಎಸ್.ಹಂಡೆ, ಶೈಲೇಶ್ ಎಂ.ಕೊಡಕಿನಿ, ಸಿಎಸ್‌ಆರ್ ಟೀಮಿನ ಸಿ.ಅವಿನಾಶ್,ಉಲ್ಲಾಸ್,ಚತೀಶ್‌ಚಂದ್ರ,ಮಾರುಕಟ್ಟೆ ವಿಭಾಗದ ಜೆ.ಡಿ.ಕಾಮಲ್,ನಾಗಾನಂದ್,ರೋಟರಿ ಕ್ಲಬ್ ಅಧ್ಯಕ್ಷ ವೇಲು, ಮಿಲಿಂದ್ ದೇಶಪಾಂಡೆ, ರೇವತಿ ಕಾಮಾಂತ್, ಶಾಲಾ ಮುಖ್ಯಶಿಕ್ಷಕಿ ಮಂಗಳ ಕುಮಾರಿ ಇದ್ದರು.

