ದೊಡ್ಡಬಳ್ಳಾಪುರ: ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಶಾಸಕ ಟಿ.ವೆಂಕಟರಮಣಯ್ಯ ಶಂಕುಸ್ಥಾಪನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಕಟ್ಟಡ ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವುದು ಗುತ್ತಿಗೆದಾರನ ಜವಬ್ದಾರಿಯಾಗಿದ್ದು,ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲವಾಗಿದೆ. ತುರ್ತು ಚಿಕಿತ್ಸಾ ಸೌಲಭ್ಯ, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ವಾರ್ಡ್, ಹೇರಿಗೆ ವಾರ್ಡ ಸೇರಿದಂತೆ ಅಧುನಿಕ ವಿಧಾನದ ಸೌಲಭ್ಯವನ್ನು ಈ ಆಸ್ಪತ್ರೆ ಒಳಗೊಂಡಿರಲಿದೆ ಎಂದರು.
ಕರೊನಾ ಸೋಂಕಿನ ಕುರಿತು ನಿರ್ಲಕ್ಷ್ಯ ಬೇಡಾ..
ಜನತೆ ಕರೊನಾ ಸೋಂಕಿನ ವಿಚಾರದಲ್ಲಿ ಅಸಡ್ಡೆ ತೋರುತ್ತಿರುವುದರಿಂದ ತಾಲೂಕಿನಲ್ಲಿ ಸೋಂಕಿತರ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಯಾಗಿದೆ. ಸಾರ್ವಜನಿಕರು ಸೋಂಕಿನ ಲಕ್ಷಣಗಳು ಕಂಡುಬಂದ ಕೂಡಲೇ ಚಿಕಿತ್ಸೆ ಪಡೆದಲ್ಲಿ ಸೋಂಕಿನಿಂದ ಪಾರಾಗಬಹುದಾಗಿದೆ ಎಂದರು.
ಜಿಲ್ಲಾಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಮಾತನಾಡಿ, ಹುಲಿಕುಂಟೆ ವ್ಯಾಪ್ತಿಗೆ ಬಹುದಿನಗಳ ಕೊರತೆಯಾಗಿದ್ದ ಸರ್ಕಾರಿ ಆಸ್ಪತ್ರೆಗೆ ನೂತನ ಕಟ್ಟಡದ ಕೊರತೆ ಕೆಲವೇ ದಿನಗಳಲ್ಲಿ ನೀಗಲಿದ್ದು, ಸುಮಾರು1ಕೋಟಿ 80 ಲಕ್ಷದ ಅನುದಾನ ಹಾಗೂ ಹಳೆ ಆಸ್ಪತ್ರೆಯ 32ಲಕ್ಷದ ಬಾಕಿ ಸೇರಿ ಸುಮಾರು 2ಕೋಟಿ12 ಲಕ್ಷ ಮೊತ್ತದಲ್ಲಿ ನಿರ್ಮಾಣವಾಗಲಿರುವ ಈ ಕಟ್ಟದಲ್ಲಿ ಈ ವ್ಯಾಪ್ತಿಯ ಜನತೆಗೆ ಉತ್ತಮ ಚಿಕಿತ್ಸಾ ಸೌಲಭ್ಯ ದೊರಕಲಿದೆ ಎಂದರು.
ಇದೇ ವೇಳೆ ಸುಮಾರು 36 ಲಕ್ಷ ಅನುಧಾನದಲ್ಲಿ ಪಶು ಆಸ್ಪತ್ರೆ ಕಟ್ಟಡ ಕಾಮಗಾರಿ ಸಹ ಚಾಲನೆ ನೀಡಲಾಯಿತು.
ಈ ವೇಳೆ ವಿಧಾನ ಪರಿಷತ್ ಸದಸ್ಯ ರವಿ, ತಾಪಂ ಅಧ್ಯಕ್ಷೆ ರತ್ನಮ್ಮಜಯರಾಂ, ಉಪಾಧ್ಯಕ್ಷೆ ಪದ್ಮಾವತಿ ಅಣ್ಣಯ್ಯಪ್ಪ, ಜಿಪಂ ಸದಸ್ಯ ಚುಂಚೇಗೌಡ, ಮುಖಂಡರಾದ ಅಪಕಾರನಹಳ್ಳಿ ಶ್ರೀನಿವಾಸ್,ರಾಜಗೋಪಾಲ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮಂಜುಳದೇವಿ, ತಾಲೂಕು ಆರೋಗ್ಯ ಡಾ.ಪರಮೇಶ್ವರ ಮತ್ತಿತರಿದ್ದರು.

