ದೊಡ್ಡಬಳ್ಳಾಪುರ: ಸರ್ಕಾರ ಅಂಗೀಕಾರ ಮಾಡಿರುವ ಭೂ ಸುಧಾರಣಾ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ಇಂದು ರೈತಪರ ಸಂಘಟನೆಗಳು ಕರೆ ನೀಡಿರುವ ಬಂದ್ ಅಂಗವಾಗಿ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಬೈಕ್ ರ್ಯಾಲಿ ಮೂಲಕ ಪ್ರತಿಭಟನೆ ಆರಂಭವಾಗಿದೆ.
ಈ ಬಂದ್ ನಿಮಿತ್ತ ಇಂದು ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಉಳಿದೆಲ್ಲ ಸೇವೆಗಳೂ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ನಗರದ ಎಪಿಎಂಸಿ ಮಾರುಕಟ್ಟೆ ಹಾಗೂ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಾಗಿಲು ಮುಚ್ಚಿವೆ. ವಾಹನ ಸಂಚಾರ ಬಹುತೇಕ ವಿರಳವಾಗಿದ್ದು ಬಂದ್ ವಾತಾವರಣ ಕಂಡುಬರುತ್ತಿದೆ.
ರೈತಪರ ಸಂಘಟನೆಗಳು ಕರೆ ನೀಡಿರುವ ಬಂದ್ಗೆ ದಲಿತ, ಕನ್ನಡಪರ, ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿರುವ ಜತೆಗೆ ಪ್ರತಿ ಪಕ್ಷಗಳೂ ಬೆಂಬಲ ಘೋಷಿಸಿವೆ. ಈ ಕಾರಣದಿಂದ ಬಂದ್ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಮುಂಜಾಗ್ರತಾ ಕ್ರಮವಾಗಿ ಡಿವೈಎಸ್ಪಿ ಟಿ.ರಂಗಪ್ಪ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೂ ಬಸ್ತ್ ಕೈಗೊಂಡಿದ್ದಾರೆ..

