ದೊಡ್ಡಬಳ್ಳಾಪುರ: ಕೋವಿಡ್-19 ಸಾಧಕ ಬಾಧಕ ಚಿಂತಿಸಿ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಶಾಲೆಗಳನ್ನು ಆರಂಭಿಸುವುದಾದರೆ ಶಿಕ್ಷಣ ಇಲಾಖೆಗೆ ಬೆಂಬಲ ನೀಡಲಾಗುವುದೆಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.
ಮಂಗಳವಾರ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೋವಿಡ್-19 ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಕರೊನಾ ಸೋಂಕು ತಡೆಗಟ್ಟಲು ಮುಚ್ಚಲಾಗಿರುವ ಶಾಲೆಗಳನ್ನು ಮರು ತೆರೆಯುವ ಕುರಿತು ಶಾಸಕರ ಅಭಿಪ್ರಾಯ ಸಂಗ್ರಹಿಸುವುದಾಗಿ ಹೇಳಿರುವ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಶಾಸಕ ಟಿ.ವೆಂಕಟರಮಣಯ್ಯ ಉತ್ತರ ನೀಡಿದ್ದು, ಶಿಕ್ಷಣ ಸಚಿವರಿಂದ ಯಾವುದೇ ಪತ್ರ ಬಂದಿಲ್ಲ. ನಮ್ಮ ಅಭಿಪ್ರಾಯವನ್ನು ಕೇಳಿದರೆ ಕರೊನಾ ಸೋಂಕು ಉಲ್ಬಣಗೊಳ್ಳುತ್ತಿರುವ ಈ ಸಂಧರ್ಭದಲ್ಲಿ ಸಾಧಕ ಬಾಧಕಗಳನ್ನು ಚಿಂತಿಸಬೇಕಿದೆ, ಕೋವಿಡ್-19 ನಿಯಮ ಪಾಲಿಸಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಶಾಲೆಗಳನ್ನು ತೆರೆದರೆ ಮಾತ್ರ ಬೆಂಬಲ ನೀಡಲಾಗುವುದು ಎಂದರು.
ನಂತರ ಮಾತನಾಡಿದ ಅವರು, ತಾಲೂಕಿನಲ್ಲಿ ಕರೊನಾ ಸೋಂಕು ನಿಯಂಯ್ರಣಕ್ಕೆ ನಿಯಮಗಳನ್ನು ಬಿಗಿಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಪಾಡದವರಿಂದ ದಂಡವಾಗಿ 2,37,900ರೂಗಳನ್ನು ಕಟ್ಟಿಸಲಾಗಿದೆ.
ಚಿಕಿತ್ಸೆಗೆ ತೆರಳದೆ ಮೆಡಿಕಲ್ ಸ್ಟೋರ್ ಗಳಿಂದ ಮಾತ್ರೆ ಪಡೆದು ಸ್ವಯಂ ಚಿಕಿತ್ಸೆ ಪಡೆಯುವವರ ಬಗ್ಗೆ ನಿಗಾವಹಿಸುವುದು, ಮೆಡಿಕಲ್ ಸ್ಟೋರ್ ಮಾಲೀಕರ ಸಭೆ ಶೀಘ್ರವಾಗಿ ನಡೆಸಿ ಕೋವಿಡ್-19 ನಿಯಂತ್ರಣ ಕ್ರಮಕ್ಕೆ ಸಹಕಾರ ಕೋರುವುದು. ಜಿಲ್ಲಾ ಆರೋಗ್ಯ ಅಧಿಕಾರಿಯ ಸಭೆಗೆ ಕರೆಸಿ ಕರೊನಾ ಸೋಂಕಿನ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಚರ್ಚಿಸುವುದು ಹಾಗೂ ತಾಲೂಕು ಹಾಗು ಜಿಲ್ಲಾ ಕೋವಿಡ್-19 ಬುಲೆಟಿನ್ ವರದಿ ಗೊಂದಲ ಪರಿಹರಿಸಲು ಜಿಲ್ಲಾ ಆರೋಗ್ಯ ಅಧಿಕಾರಿಗೆ ಕಟ್ಟು ನಿಟ್ಟಿನ ಸೂಚನೆ ನೀಡುವಂತೆ ಉಪವಿಭಾಗಾಧಿಕಾರಿ ಅರುಳ್ ಕುಮಾರ್ ಅವರಿಗೆ ತಿಳಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಕೋವಿಡ್-19 ಬುಲೆಟಿನ್ ವಸ್ತು ನಿಷ್ಟವಾಗಿದ್ದು, ತಾಲೂಕು ಬುಲೆಟಿನ್ ಅನಿರ್ವಾರ್ಯತೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೂ ತಿಳಿಸಲಾಗಿದೆ ಎಂದರು.
ಈ ವೇಳೆ ಕೋವಿಡ್-19 ತಪಾಸಣೆ ಸ್ಥಳ ಪ್ರತ್ಯೇಕ ಗೊಳಿಸಿ ಎಪಿಎಂಸಿ ಸಭಾಂಗಣದಲ್ಲಿ ಇರುವ ಕಟ್ಟಡ ಬಳಸಿಕೊಳ್ಳುವುದು, ರಾಜೀವ್ ಗಾಂಧಿ ಆಸ್ಪತ್ರೆಗೆ ಕಳಿಸಲಾಗುತ್ತಿರುವ ಕೋವಿಡ್-19 ವರದಿ ವಿಳಂಬವಾಗದಂತೆ ನಿಗಾವಹಿಸುವುದು, ಹೆಚ್ಚುವರಿ ಸಿಬ್ಬಂದಿಗಳ ಕೊರತೆ ನೀಗಲು ಕ್ರಮವಹಿಸಲು ಸೂಚನೆ ನೀಡಿದರು.
ಡಿವೈಎಸ್ಪಿ ಟಿ.ರಂಗಪ್ಪ ಮಾತನಾಡಿ, ಅಂಗಡಿಗಳಲ್ಲಿ ಸ್ಯಾನಿಟೈಸರ್ ಬಳಸದ ಹಾಗೂ ಮಾಸ್ಕ್ ಧರಿಸದೆ ವ್ಯವಹರಿಸುವ ವರ್ತಕರಿಗೆ ಹಾಗೂ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಜವಬ್ದಾರಿಯುತವಾಗಿ ವರ್ತಿಸುವವರಿಗೆ ದಂಡವನ್ನು ವಿಧಿಸುವ ಪ್ರಕ್ರಿಯೆಗೆ ಹೆಚ್ಚು ಮಾಡಲಾಗುವುದೆಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಅರುಳ್ ಕುಮಾರ್, ತಹಶಿಲ್ದಾರ್ ಟಿ.ಎಸ್.ಶಿವರಾಜ್, ಆರೋಗ್ಯಾಧಿಕಾರಿ ಡಾ.ಪರಮೇಶ್ವರ, ಸಹಾಯಕ ಉಪ ನಿರ್ದೇಶಕ ಗಂಗರಾಜ್ ಇದ್ದರು.

