ದೊಡ್ಡಬಳ್ಳಾಪುರ: ಇ-ಆಫೀಸ್ ಯೋಜನೆಯನ್ನು ತಾಲ್ಲೂಕು ಕಚೇರಿಯಲ್ಲಿ ಜಾರಿ ಮಾಡಿರುವುದರಿಂದ ತಾಲ್ಲೂಕು ಕಚೇರಿ ಕೆಲಸಗಳಿಗಾಗಿ ಸಾರ್ವಜನಿಕರು ಅಲೆಯುವುದು ತಪ್ಪಲಿದೆ ಜೊತೆಗೆ ಸಮಯ ಉಳಿಯಲಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿಯಲ್ಲಿ ಇ-ಆಫೀಸ್ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಯೋಜನೆಯಿಂದ ಹಳ್ಳಿಯ ಜನತೆ ಹಾಗೂ ಸಾರ್ವಜನಿಕರು ಮಧ್ಯವರ್ತಿಗಳ ಕೈಗೆ ಸಿಲುಕಿ ಹಣ ಮತ್ತು ಸಮಯ ವ್ಯರ್ಥ ಮಾಡುವುದು ತಪ್ಪಲಿದೆ. ಶೀಘ್ರವಾಗಿ ಅರ್ಜಿಗಳು ವಿಲೇವಾರಿಯಾಗಿ ಸುಗಮವಾಗಿ ಕೆಲಸಗಳು ನಡೆಯುತ್ತವೆ ಎಂದರು.
ತಹಶೀಲ್ದಾರ್ ಟಿ.ಎಸ್ ಶಿವರಾಜು ಮಾತನಾಡಿ ಇ-ಆಫೀಸ್ ನಿಂದಾಗಿ ಜನತೆ ತಮ್ಮ ಮೊಬೈಲ್ ಗಳಲ್ಲೇ ತಮ್ಮ ಅರ್ಜಿಯ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬಹುದು. ಕಚೇರಿಗೆ ಪದೇ ಪದೇ ಅಲೆದಾಡುವುದು ತಪ್ಪಲಿದೆ ಎಂದರು.
ಈ ವೇಳೆ ಉಪವಿಭಾಗಧಿಕಾರಿ ಅರುಳ್ ಕುಮಾರ್, ಡಿವೈಎಸ್ಪಿ ಟಿ. ರಂಗಪ್ಪ ಸೇರಿ ಸಿಬ್ಬಂದಿಗಳು ಇದ್ದರು.

