ದೊಡ್ಡಬಳ್ಳಾಪುರ: ಸೆ.19ರಿಂದಲೇ ಇಂಡಿಯನ್ ಪ್ರೀಮಿಯರ್ ಲೀಗ್ ಹಬ್ಬ ಶುರುವಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಟೂರ್ನಿ ನಡೆಯುತ್ತಿದೆ.
ಐಪಿಎಲ್ 13ನೇ ಆವೃತ್ತಿಗೆ ಸಂಬಂಧಿಸಿ ಬೆಟ್ಟಿಂಗ್ ನಡೆಸುತ್ತಿದ್ದ ಮೂವರನ್ನು ಡಿವೈಎಸ್ಪಿ ಟಿ.ರಂಗಪ್ಪ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳ ಮೇಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಗಂಟಿಗಾನಹಳ್ಳಿಯಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 18700ರೂ ನಗದು ಮತ್ತು ಟಿವಿಯನ್ನು ವಶಪಡಿಸಿಕೊಳ್ಳಲಾಗಿದೆ.
ಕೆಕೆಆರ್ ಮತ್ತು ರಾಜಸ್ಥಾನ ರಾಯಲ್ಸ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಡಿವೈಎಸ್ಪಿ ಟಿ.ರಂಗಪ್ಪ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ಗಜೇಂದ್ರ, ಸಿಬ್ಬಂದಿಗಳಾದ ರಾಧಕೃಷ್ಣ, ರಮೇಶ್, ಸುರೇಶ್ ಪೊಲೀಸರ ತಂಡ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಆರೋಪಿಗಳು ಬೆಟ್ಟಿಂಗ್ ನಡೆಸುತ್ತಿದ್ದುದು ಕಂಡುಬಂದಿತ್ತು ಎಂದು ಗ್ರಾಮಾಂತರ ಠಾಣೆ ಸಬ್ ಇನ್ಸ್ಪೆಕ್ಟರ್ ಗಜೇಂದ್ರ ಹರಿತಲೇಖನಿಗೆ ತಿಳಿಸಿದ್ದಾರೆ.
ಬಂಧಿತರನ್ನು ಚನ್ನಕೃಷ್ಣ, ಹರೀಶ್ ಮತ್ತು ಶಶಿಕುಮಾರ್ ಎಂದು ಗುರುತಿಸಲಾಗಿದೆ. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

