ದೊಡ್ಡಬಳ್ಳಾಪುರ: ಕರೊನಾ ಸೋಂಕು ದೃಢಪಡದೇ ಇದ್ದರು ಸಹ ಕರೊನಾ ರೀತಿಯ ಚಿಕಿತ್ಸೆ ನೀಡುವ ಮೂಲಕ ನಗರದ ವ್ಯಕ್ತಿಯೋರ್ವರು ಮೃತಪಡಲು ಕಾರಣವಾಗಿರುವ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡಿಗರ ಬಣ) ಸಂಸ್ಥಾಪಕ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಅವರು ಈ ಬಗ್ಗೆ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ದೃವನಾರಾಯಣ್ ಎನ್ನುವವರು ಜ್ವರ, ಉಸಿರಾಟದ ತೊಂದರೆ ಎಂದು ಆಸ್ಪತ್ರೆಗೆ ದಾಖಲಾಗಿದ್ದಾಗ ಮಗನಿಂದ ಕರೊನಾ ಚಿಕಿತ್ಸೆಗೆ ಅಗತ್ಯ ಇರುವ ಔಷಧಿ, ಚುಚ್ಚು ಮದ್ದನ್ನು ಹೊರಗಿನಿಂದಲೇ ತರಿಸಿಕೊಂಡಿದ್ದಾರೆ. ಧೃವನಾರಾಯಣ್ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲ ದ್ರವ ಪರೀಕ್ಷೆ ಮಾಡಿಸಿದ್ದರು. ಆದರೆ ಪ್ರಯೋಗಾಲಯದಿಂದ ವರದಿ ಬರುವುದು ತಡವಾಗಿ ಜ್ವರ ಬಂದಿದ್ದರಿಂದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಧೃವನಾರಾಯಣ್ ಅವರ ಗಂಟಲ ದ್ರವದ ಪರೀಕ್ಷಾ ವರದಿಯು ನೆಗೆಟಿವ್ ಎಂದು ಬಂದಿದೆ. ಧೃವನಾರಾಯಣ್ ಅವರ ಮಗ ನಮಗೆ ನೀಡಿದ ದೂರಿನ ಮೇರೆಗೆ ಆಸ್ಪತ್ರೆಯ ವೈದ್ಯರನ್ನು ನಾವು ಪ್ರಶ್ನೆ ಮಾಡಿದಕ್ಕೆ ಹಣ ವಸೂಲಿಯ ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಆಡಿಯೋ ದಾಖಲಾತಿಯು ಇದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೂ ಕೇಳಿಸಿದರು.
ಧೃವನಾರಾಯಣ್ ಅರೊಗ್ಯ ಹದಗೆಟ್ಟಿದೆ ಎಂದು ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದು, ಈ ಕಾರಣ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಬಂದಾಗ ಧೃವನಾರಾಯಣ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಆದರೆ ಕೋವಿಡ್ ಬಂದಿರುವ ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ನಿಯಮಾನುಸಾರ ಮಾಡದೆ ಆಂಧ್ರಪ್ರದೇಶದ ಧೃವನಾರಾಯಣ್ ಅವರ ಸ್ವಗ್ರಾಮಕ್ಕೆ ಇಲ್ಲಿಂದ ಮೃತದೇಹವನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ ನನ್ನ ವಿರುದ್ದ ಹಣ ವಸೂಲಿ ಆರೋಪ ಮಾಡಿರುವ ಆಸ್ಪತ್ರೆಯ ವೈದ್ಯರ ವಿರುದ್ದ ಕಾನೂನು ಹೋರಾಟ ಮಾಡಲಾಗುವುದು. ಘಟನೆ ಕುರಿತಂತೆ ತನಿಖೆಗೆ ಆಗ್ರಹಿಸಿ ಸೆ.5 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡಿಗರ ಬಣ) ರಾಜ್ಯ ಘಟಕದ ಅಧ್ಯಕ್ಷ ಕೆ.ನಾಗೇಶ್, ಯಲಹಂಕ ಘಟಕದ ಅಧ್ಯಕ್ಷ ಚೇತನ್, ಮುಖಂಡರಾದ ಅರ್ಜುನ್, ಜಗದೀಶ್, ಆರ್. ರಮೇಶ್ ಇದ್ದರು.

