ದೊಡ್ಡಬಳ್ಳಾಪುರ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅ.3 ರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಸಂಘದ ತಾಲ್ಲೂಕು ಮುಖಂಡ ಆರ್.ಜಗದೀಶ್, ಕೆ.ಸಿ.ರುದ್ರೇಶ್ ತಿಳಿಸಿದ್ದಾರೆ.
ಅವರು ಈ ಬಗ್ಗೆ ಮಾಹಿತಿ ನೀಡಿ, ಆರೋಗ್ಯ ಇಲಾಖೆ ಮತ್ತು ರಾಷ್ಟೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೋರಗುತ್ತಿಗೆ ನೌಕರರು ವೈದ್ಯಕೀಯ, ಅರೆವೈದ್ಯಕೀಯ ಮತ್ತು ಕಚೇರಿ ಸಿಬ್ಬಂದಿಗಳ ಹಲವಾರು ವರ್ಷಗಳ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ವಹಿಸುತ್ತಿಲ್ಲ. ಹೀಗಾಗಿ ಎಲ್ಲಾ ರಾಷ್ಟೀಯ ಕಾರ್ಯಕ್ರಮಗಳ ಕೋವಿಡ್-19 ಮತ್ತು ಆರ್ಥಿಕ ಹಾಗೂ ಭೌತಿಕ ವರದಿಗಳನ್ನು ಸಲ್ಲಿಸದೆ ಇರಲು ಹಾಗೂ ಸಾಂಕೇತಿಕವಾಗಿ ಧರಣಿ ಪ್ರತಿಭಟನೆಯನ್ನು ಮಾಡಲು ಸಂಘವು ನಿರ್ಧರಿಸಿದೆ. ಗುತ್ತಿಗೆ ಮತ್ತು ಹೋರಗುತ್ತಿಗೆ ನೌಕರರ ಹಿತಕಾಯುವಲ್ಲಿ ಮತ್ತು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಧರಣಿ ನಡೆಸುವುದು ಅನಿವಾರ್ಯವಾಗಿದೆ ಎಂದರು.
ಕೋವಿಡ್-19 ಸಂದರ್ಭದಲ್ಲಿ ಕೆಲಸದಲ್ಲಿ ನೌಕರರು ಸಾಕಷ್ಟು ಶ್ರಮ ವಹಿಸುತ್ತಿದ್ದೇವೆ. ಆದರೆ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿರುವುದನ್ನು ಸಂಘವು ಖಂಡಿಸುತ್ತದೆ ಮತ್ತು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾಗಳ ಕಚೇರಿ, ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಮಾಡಲಾಗುವುದು ಎಂದರು.
ನಮ್ಮ ಬೇಡಿಕೆಗಳು ಹಾಗೂ ಧರಣಿ ನಡೆಸುವ ಕುರಿತಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ನಾಯ್ಕ್, ಉಪವಿಭಾಗಾಧಿಕಾರಿ ಅರುಳ್ಕುಮಾರ್, ತಹಶೀಲ್ದಾರ್ ಟಿ.ಎಸ್.ಶಿವರಾಜ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಪರಮೇಶ್ವರ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ರಾಮಕೃಷ್ಣಪ್ಪ ಅವರಿಗೂ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ಮಹತೇಂಶ್,ದಿನೇಶ್,ಮಂಜುನಾಥ್,ನಾಗರಾಜ್ ಇದ್ದರು.

