ದೊಡ್ಡಬಳ್ಳಾಪುರ: ಗೊಲ್ಲ ಅಭಿವೃದ್ಧಿ ನಿಗಮವನ್ನು ಚುನಾವಣೆ ಲಾಭಕ್ಕಾಗಿ ರಾತ್ರೋರಾತ್ರಿ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನಾಗಿಸುವ ಮೂಲಕ ರಾಜ್ಯ ಸರ್ಕಾರ 35 ಲಕ್ಷ ಜನಸಂಖ್ಯೆ ಹೊಂದಿರುವ ಗೊಲ್ಲ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ದೊಡ್ಡಬಳ್ಳಾಪುರ ತಾಲೂಕು ಯಾದವ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕೆ.ರಮೇಶ್ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡುಗೊಲ್ಲ ಸಮುದಾಯ ಗೊಲ್ಲ ಸಮುದಾಯದಲ್ಲಿನ ಪಂಗಡವಾಗಿದೆಯೇ ಹೊರತು ಪ್ರತ್ಯೇಕವಲ್ಲ. ಗೊಲ್ಲ ಜಮಾಂಗ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಹಿಂದುಳಿದಿದೆ. ಜನಾಂಗಕ್ಕಾಗಿ ಅಭಿವೃದ್ಧಿ ನಿಗಮ ಮಾಡಬೇಕೆಂಬ ಬಹುದಿನದ ಬೇಡಿಕೆಯನ್ನು ರಾಜಕೀಯ ಲಾಭಕ್ಕಾಗಿ ರಾತ್ರಿ ಕಳೆದು ಬೆಳಕಾಗುವುದರ ಒಳಗೆ ಬದಲಿಸಿರುವುದರಿಂದ ಜನಾಂಗಕ್ಕೆ ಅನ್ಯಾಯವಾಗಿದೆ ಎಂದರು.
ರಾಜ್ಯ ಯಾದವ ಸಂಘದ ಮಾಜಿ ಪದಾಧಿಕಾರಿ ಲಕ್ಷ್ಮೀನಾರಾಯಣ್ ಮಾತನಾಡಿ, ರಾಜ್ಯ ಸರ್ಕಾರದ ಆದೇಶ ಸಂವಿಧಾನ ಆಶಯಕ್ಕೆ ವಿರುದ್ದವಾಗಿದೆ. ಇದು ಸಮುದಾಯವನ್ನು ಒಡೆಯುವ ಶಡ್ಯಂತ್ರ. ಎಲ್ಲಾ ಜನಾಂಗಗಳಿಗಿರುವಂತೆ ಅಭಿವೃದ್ಧಿ ನಿಗಮ ಕೂಗಿಗೆ ರಾಜ್ಯ ಸರ್ಕಾರ ಒಡೆದು ಆಳುವ ನೀತಿಯ ಬಳುವಳಿ ನೀಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಕಣಿವೇಪುರ ಸುನೀಲ್ ಕುಮಾರ್ ಮಾತನಾಡಿ, ಸಿದ್ದರಾಮ ಸರ್ಕಾರದ ಸಂಧರ್ಭದಲ್ಲಿ ವಿರಶೈವಲಿಂಗಾಯಿತರನ್ನು ಒಡೆಯುತ್ತಿದ್ದಾರೆಂದು ಆಕ್ರೋಶ ಹೊರಹಾಕಿದ ಯಡಿಯೂರಪ್ಪನವರು ಇಂದು ಗೊಲ್ಲ ಸಮುದಾಯವನ್ನು ಒಡೆಯುತ್ತಿದ್ದಾರೆ. ಇದಕ್ಕೆ ಸಮುದಾಯ ಅವಕಾಶ ನೀಡುವುದಿಲ್ಲ, ಸರ್ಕಾರ ತ್ವರಿತವಾಗಿ ಆದೇಶವನ್ನು ಪರಿಷ್ಕರಿಸಬೇಕಿದೆ ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಅನಿರ್ವಾರ್ಯವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವ ಅಧ್ಯಕ್ಷ ಡಿ.ನಾಗರಾಜ್, ನಿರ್ದೇಶಕ ಚಿಕ್ಕಪಿಳ್ಳಪ್ಪ, ಸಹ ಕಾರ್ಯದರ್ಶಿ ಶ್ರೀನಿವಾಸ್, ಮುಖಂಡರಾದ ಅಣ್ಣಯ್ಯಪ್ಪ, ನಾರಾಯಣ್, ಶ್ರೀರಾಮರೆಡ್ಡಿ, ದಿಬ್ಬಗಿರಿಯಪ್ಪ, ಜಯರಾಂ, ಹರೀಶ್ ಮತ್ತಿತರಿದ್ದರು.

