ದೊಡ್ಡಬಳ್ಳಾಪುರ: ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ವ್ಯಕ್ತಿಯನ್ನು ಸಬ್ ಇನ್ಸ್ಪೆಕ್ಟರ್ ಬೇಬಿವಾಲೇಕರ್ ನೇತೃತ್ವದ ಪೊಲೀಸರ ತಂಡ ಬಂಧಿಸಿರುವ ಘಟನೆ ತಾಲೂಕಿನ ಬೆಣಸಿಹಟ್ಟಿ ಗ್ರಾಮದಲ್ಲಿ ನಡೆದಿದೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಬೆಣಸಿಹಟ್ಟಿ ಗ್ರಾಮದ ಕೃಷ್ಣಪ್ಪ (52) ಬಂಧಿತ ಆರೋಪಿಯಾಗಿದ್ದಾನೆ. ಮನೆಯ ಹಿತ್ತಲಿನಲ್ಲಿನ ನಿರ್ಮಿಸಿದ್ದ ಕೈತೋಟದಲ್ಲಿ, ಯಾರಿಗೂ ಕಾಣದಂತೆ ಸುಮಾರು 4ಕೆಜಿ 475 ಗ್ರಾಂ ತೂಕದ. ಅಂದಾಜು 1ಲಕ್ಷ 30 ಸಾವಿರ ಮೌಲ್ಯ ಬಾಳುವ ಗಾಂಜಾ ಗಿಡಗಳನ್ನು ಬೆಳೆದಿದ್ದ ಎನ್ನಲಾಗಿದೆ.
ಖಚಿತ ಮಾಹಿತಿಯ ಆಧರಿಸಿ ಡಿವೈ ಎಸ್ಪಿ ಟಿ.ರಂಗಪ್ಪ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಕುಮಾರ್ ಅವರ ಸೂಚನೆಯ ಮೇರೆಗೆ. ಸಬ್ಇನ್ಸ್ಪೆಕ್ಟರ್ ಬೇಬಿವಾಲೇಕರ್ ಹಾಗೂ ಸಿಬ್ಬಂದಿಗಳಾದ ರಂಗಸ್ವಾಮಯ್ಯ, ರಮೇಶ್, ಹುಸೇನ್, ವಿವೇಕ್ ತಂಡ ದಾಳಿ ನಡೆಸಿ ಆರೋಪಿ ಹಾಗೂ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ದಾಳಿಯನ್ನರಿತ ಆರೋಪಿ ಗಾಂಜಾ ಗಿಡಗಳನ್ನು ಕಿತ್ತು ಸಾಗಿಸುವ ಪ್ರಯತ್ನ ಮಾಡಿದ್ದು, ಪೊಲೀಸರು ಆರೋಪಿಯ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಕುಮಾರ್ ಹರಿತಲೇಖನಿಗೆ ತಿಳಿಸಿದ್ದಾರೆ.

