ದೊಡ್ಡಬಳ್ಳಾಪುರ: ತಾಲೂಕು ಕಲಾವಿದರ ಸಂಘದ ವತಿಯಿಂದ ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಇತ್ತೀಚೆಗೆ ಅಗಲಿದ ಚಿತ್ರನಟ ಕೊಡಗನೂರು ಜಯ ಕುಮಾರ್, ತಾಲೂಕಿನ ಹರಿಕಥಾ ವಿದ್ವಾನ್ ವಿ.ಕೃಷ್ಣಮೂರ್ತಿ, ಕಲಾವಿದರಾದ ಎಚ್.ಸಿ.ಜಗದೀಶ್, ಚೆನ್ನವೀರ, ನಾರಾಯಣ, ಸತ್ಯನಾರಾಯಣ, ಮುನಿಬಸಪ್ಪ ಅವರಿಗೆ ನುಡಿ ನಮನ ಕಾರ್‍ಯಕ್ರಮವನ್ನು ಸಂಘದ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಂಘದ ಅಧ್ಯಕ್ಷ ಎಸ್.ರಾಮಾಂಜಿನಪ್ಪ ಮಾತನಾಡಿ, ಕೊಡಗನೂರು ಜಯ ಕುಮಾರ್ ಅವರು ರಂಗಭೂಮಿಯಲ್ಲಿ ಅಸಾಧಾರಣ ಸಾಧನೆ ಮಾಡಿ, ಚಿತ್ರರಂಗದಲ್ಲಿಯೂ ಗುರುತಿಸಿಕೊಂಡಿದ್ದರು. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸಾಧನೆ ಬಹುಶಃ ಯಾವ ಕಲಾವಿದರೂ ಸಾಧಿಸಲಾರರು. ಕಲೆಯ ಮೇಲೆ ಅವರಿಗಿರುವ ಶ್ರದ್ಧೆ, ಆರಾಧನೆ ಅವರನ್ನು ಉನ್ನತ ಮಟ್ಟಕ್ಕೆ ಕರೆದೊಯ್ದಿದೆ. ಕರ್ನಾಟಕದ ಹಾಗೂ ಕನ್ನಡಿರ ಮೇಲೆ ಅವರಿಗೆ ಇದ್ದ ಪ್ರೀತಿ ಸ್ಮರಣೀಯವಾಗಿದ್ದು, ಇಂತಹ ಮಹನೀಯರು ಎಲ್ಲಾ ಕಲಾವಿದರಿಗೆ ಸ್ಪೂರ್ತಿ ಎಂದರು.
ತಾಲೂಕು ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್ ಮಾತನಾಡಿ, ತಾಲೂಕಿನಲ್ಲಿ ಕಲಾವಿದರು ನಿಧನರಾಗಿರುವುದು ನೋವಿನ ಸಂಗತಿ ಎಂದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ ಮಾತನಾಡಿ, ಕಲಾವಿದರು ಹಣಕ್ಕಾಗಿ, ಪ್ರಚಾರಕ್ಕಾಗಿ ತಮ್ಮ ಕಲೆಯನ್ನು ಪ್ರದರ್ಶಿಸದೇ ಕಲಾಸೇವೆಯಿಂದ ಸಾಧನೆ ಮಾಡಿದಾಗ ಹಣ ಕೀತಿ ಲಭಿಸುತ್ತದೆ ಎನ್ನುವುದಕ್ಕೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೇ ನಿದರ್ಶನ ಎಂದರು.
ಹರಿಕಥಾ ವಿದ್ವಾನ್ ವಿ.ಕೃಷ್ಣಮೂರ್ತಿ, ಕಲಾವಿದರಾದ ಎಚ್.ಸಿ.ಜಗದೀಶ್, ಚೆನ್ನವೀರ, ನಾರಾಯಣ, ಸತ್ಯನಾರಾಯಣ, ಮುನಿಬಸಪ್ಪ ಅವರ ಸಾಧನೆಗಳನ್ನು ಸ್ಮರಿಸಿದರು.
ತಾಲೂಕು ಕಲಾವಿದರ ಸಂಘದ ಉಪಾಧ್ಯಕ್ಷರಾದ ಬಿ.ಮುನಿರಾಜು,ವೀರೇಗೌಡ, ಖಜಾಂಚಿ ಮುನಿಪಾಪಯ್ಯ, ಹಿರಿಯ ಕಲಾವಿದರಾದ ಎಂ.ವೆಂಕಟರಾಜು, ಟಿ.ವಿ.ಕೃಷ್ಣಪ್ಪ,ಎನ್.ವೆಂಕಟೇಶ್ ಮೊದಲಾದವರು ಭಾಗವಹಿಸಿದ್ದರು.

