ಪತ್ತನಂತ್ತಿಟ್ಟ: ಶಬರಿಮಲೆ ಶ್ರೀ ಧರ್ಮಶಾಸ್ತಾ ದೇಗುಲದಲ್ಲಿ ತುಲಾ ಮಾಸ ಪೂಜೆಗಾಗಿ ಅಕ್ಟೋಬರ್ 16ರಂದು ಬಾಗಿಲು ತೆರೆಯಲಾಗುತ್ತಿದೆ.
ತುಲಾ ಮಾಸ ಪೂಜೆಗಾಗಿ ಐದು ದಿನಗಳ ಕಾಲ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು.ಆದರೆ ಕರೊನಾ ಕಾರಣ ಈ ವಿಶೇಷ ಪೂಜೆಗಾಗಿ ದಿನಂಪ್ರತಿ ಗರಿಷ್ಠ 250 ಮಂದಿ ಭಕ್ತರಿಗೆ ಮಾತ್ರವೇ ಪ್ರವೇಶ ನೀಡಲು ನಿರ್ಧರಿಸಲಾಗಿದೆ.
ಇದಕ್ಕಾಗಿ ಕೇರಳ ಪೊಲೀಸ್ ವರ್ಚುವಲ್ ಕ್ಯೂ ಮೂಲಕ ಅರ್ಜಿ ಸಲ್ಲಿಸಬೇಕು. ಅಲ್ಲದೆ ದರ್ಶನ ನಡೆಸುವ 48 ತಾಸುಗಳ ಮೊದಲು ಭಕ್ತರು ತಾವು ಕೋವಿಡ್ ತಪಾಸಣಾ ಫಲಿತಾಂಶ ನೆಗೆಟಿವ್ ಆಗಿದ್ದೇವೆ ಎಂಬ ಬಗ್ಗೆ ದೃಢೀಕರಣ ಸರ್ಟಿಫಿಕೇಟ್ ಅಥವಾ ದಾಖಲೆಗಳನ್ನು ಪೊಲೀಸ್ ವರ್ಚುವಲ್ ಕ್ಯೂ ಮೂಲಕ ಅಪ್ ಲೋಡ್ ಮಾಡಬೇಕು. ಈ ರೀತಿ ಅನುಮತಿ ಲಭಿಸಿದವರನ್ನು ನಿಲೈಕಲ್ ನಲ್ಲಿ ಆಂಟಿಜೆನ್ ತಪಾಸಣೆಗೆ ಒಳಪಡಿಸಲಾಗುವುದು ಎಂದು ಕೇರಳ ಮುಜರಾಯಿ ಇಲಾಖೆ ತಿಳಿಸಿದೆ.
ಈ ಮಧ್ಯೆ ರಾಜ್ಯದಲ್ಲಿ ಕರೊನಾ ವೈರಸ್ ಸೋಂಕು ಹರಡಲು ಆರಂಭಗೊಂಡ ಮಾರ್ಚ್ ತಿಂಗಳ ನಂತರ ಶಬರಿಮಲೆ ಪುಣ್ಯ ಕ್ಷೇತ್ರಕ್ಕೆ ಭಕ್ತರಿಗೆ ಪ್ರವೇಶ ಅವಕಾಶ ನೀಡುತ್ತಿರುವುದು ಇದು ಪ್ರಥಮವಾಗಿದೆ.

