ದೊಡ್ಡಬಳ್ಳಾಪುರ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕವಿಗಳಾದ ನಂ.ಮಹಾದೇವ್ ಸ್ವ ಗೃಹದಲ್ಲಿ ವಿಶ್ವ ಹೆಣ್ಣುಮಕ್ಕಳ ದಿನಾಚಾರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಶಾಂತಿನಗರದ ನಿವಾಸಿ ಪ್ರಮೀಳ ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಲನಜೋಗಳ್ಳಿಯ ನಾಗರತ್ನ ವಹಿಸಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಕಸಾಪ ಅಧ್ಯಕ್ಷೆ ಪ್ರಮೀಳಮಹಾದೇವ್, ಹೆಣ್ಣು ಮಕ್ಕಳ ಸದ್ಯದ ಸ್ಥಿತಿಗತಿಗಳು, ಸಮಾಜದ ವಿಕೃತ ಮನಸ್ಸಿನವರಿಂದ ಆಗುವ ಕಿರುಕುಳ, ನಿಂದನೆ,ಆಪಾದನೆಗಳಿಂದ ಹಲವಾರು ಹೆಣ್ಣುಮಕ್ಕಳು ಅನುಭವಿಸುವ ಯಾತನೆಗಳು ಕೌರ್ಯದ ಪರಮಾವಧಿಗಳಾಗಿವೆ , ಹಾಗೂ ಇತ್ತೀಚೆಗೆ ತಮಿಳುನಾಡಿನ ಗ್ರಾಮವೊಂದರಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ, ತಳ ಸಮುದಾಯದ ಚುನಾಯಿತ ಹೆಣ್ಣುಮಗಳನ್ನು ಇತರರು ಸರಿಸಮನಾಗಿ ವೇದಿಕೆಯಲ್ಲಿ ಕೂರಿಸಿಕೊಳ್ಳದೆ ನೆಲದ ಮೇಲೆ ಕುಳ್ಳರಿಸಿದ್ದು ಅತಿದೊಡ್ಡ ದುರಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಣೆಯಾದ ಹೆಣ್ಣು ಮಕ್ಕಳ ಬಗ್ಗೆ ಹಲವಾರು ದೂರುಗಳು ಮೊದಲು ದಾಖಲಾಗುತ್ತವೆ . ನಂತರ ದಿನಗಳಲ್ಲಿ ಸಾಕಷ್ಟು ಪ್ರಕರಣಗಳಿಗೆ ಉತ್ತರವೇ ಸಿಗದಾಗುತ್ತದೆ. ಈ ಬಗ್ಗೆ ಪ್ರಜ್ಞಾವಂತರು ಯೋಚಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆಂದು ಅಭಿಪ್ರಾಯ ಪಟ್ಟರು.
ಪ್ಲಾಂಟೇಷನ್ ನಿವಾಸಿ ರೇಷ್ಮಾ ಮಾತನಾಡಿ, ಭಾರತೀಯ ಹೆಣ್ಣುಮಕ್ಕಳು ನಮ್ಮ ಸಂಸ್ಕೃತಿಯ,ಆಚಾರ ವಿಚಾರಗಳನ್ನು ಅರಿತು ನಡೆಯಬೇಕೆಂದರು.
ಕವಿ ನಂ.ಮಹಾದೇವ್ ಮಾತಾಡಿ, ಹೆಣ್ಣುಮಕ್ಕಳ ಸಂಖ್ಯೆಗೆ ಸಮನಾಗಿ ಲೋಕಸಭೆ, ವಿಧಾನಸಭೆ ಗಳಲ್ಲಿ ಮಹಿಳಾ ಜನಪ್ರತಿನಿಧಿಗಳು ಇಲ್ಲದಿರುವುದು, ಹೆಣ್ಣು ಮಕ್ಕಳ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದಂತಾಗಲು ಕಾರಣ ಎಂದರು.
ಕಾರ್ಯಕ್ರಮದಲ್ಲಿ ಜಯಕರ್ನಾಟಕ ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷೆ ನಾಗರತ್ನ, ಹಸನಘಟ್ಟ ಲೀಲಾವತಿ, ನಗರ ಕಸಾಪ ಅಧ್ಯಕ್ಷ ಬಿ.ಪಿ.ಹರಿಕುಮಾರ್, ಗೌರವ ಕಾರ್ಯದರ್ಶಿ ಡಿ.ಈ.ಶಿವಕುಮಾರ್, ಪ್ರವೀಣ್ ಕುಮಾರ್, ಸೂರಿ, ರಾಕೇಶ್, ದರ್ಶನ್ ಕುಮಾರ್, ಇರ್ಫಾನ್ ಖಾನ್ ಭಾಗವಹಿಸಿದ್ದರು.

