ಬೆಂಗಳೂರು: ಕರ್ನಾಟಕದಲ್ಲಿ ಔಷಧೀಯ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಪಿರಮಲ್ ಗ್ರೂಪ್ ಆಸಕ್ತಿ ತೋರಿದ್ದು, ಇದಕ್ಕೆ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡುವುದು ಸಿಎಂ ಯಡಿಯೂರಪ್ಪ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಪಿರಮಲ್ ಗ್ರೂಪ್‍ನ ಅಧ್ಯಕ್ಷ ಆನಂದ್ ಪಿರಮಲ್ ಜೊತೆ ವರ್ಚುವಲ್ ಸಭೆ ನಡೆಸಿದ ಸಿಎಂ, ಹೂಡಿಕೆ ಸಂಬಂಧ ಚರ್ಚೆ ನಡೆಸಿದರು.
ರಾಜ್ಯ ಸರ್ಕಾರ ಕಳೆದ ದಿನಗಳಲ್ಲಿ ಅನೇಕ ಸುಧಾರಣೆಗಳನ್ನು ತಂದು ಕೈಗಾರಿಕೆಗಳಿಂದ ಅತಿ ಹೆಚ್ಚು ಹೂಡಿಕೆ ಆಕರ್ಷಿಸುತ್ತಿದೆ. ರಾಜ್ಯದಲ್ಲಿ ಹೂಡಿಕೆಗೆ ಅವಕಾಶಗಳನ್ನು ತೆರೆದಿಟ್ಟಿದೆ. ಕೊರೊನಾ ನಮಗೆ ಹೊಸ ಸವಾಲುಗಳನ್ನು ತಂದೊಡ್ಡಿದೆ. ಇತ್ತೀಚೆಗೆ ಕರ್ನಾಟಕ ನೂತನ ಕೈಗಾರಿಕಾ ನೀತಿಯನ್ನು ಘೋಷಿಸಿದ್ದು, ಸುಸ್ಥಿರ ಮತ್ತು ಸಮಗ್ರ ಕೈಗಾರಿಕಾ ಅಭಿವೃದ್ಧಿಗೆ ಇದು ಸಹಕಾರಿಯಾಗಿದೆ ಎಂದರು.
ಯೋಜನೆಗಳನ್ನು ಜಾರಿಗೆ ತರಲು ಇದ್ದ ಅಡೆತಡೆಗಳನ್ನು ನಿವಾರಿಸಿ, ಹೂಡಿಕೆಗಳನ್ನು ಆಕರ್ಷಿಸುತ್ತಿದೆ. ರಾಜ್ಯವು ಕೈಗಾರಿಕೆಗಳ ಸ್ಥಾಪನೆ, ಬೆಳವಣಿಗೆ ಹಾಗೂ ನಿರ್ವಹಣೆಗೆ ಪೂರಕ ವಾತಾವರಣವನ್ನು ಹೊಂದಿದೆ. ಬೆಂಗಳೂರು ಮಾತ್ರವಲ್ಲದೇ, ರಾಜ್ಯದ ಇತರೆಡೆಗಳಲ್ಲಿಯೂ ಕೈಗಾರಿಕೆಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಪೂರಕ ವ್ಯವಸ್ಥೆಗಳನ್ನು ಮಾಡಿದೆ ಎಂದು ಸಿಎಂ ತಿಳಿಸಿದರು.
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಸಚಿವ ಡಾ ಕೆ.ಸುಧಾಕರ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಇದ್ದರು

