ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅವಧಿ ಮುಗಿದ ಗ್ರಾಮಪಂಚಾಯಿತಿಗಳಿಗೆ ಚುನಾವಣೆ ದಿನಾಂಕ ಘೋಷಣೆಗೆ ಸಿದ್ದತೆಯನ್ನು ಚುನಾವಣೆ ಇಲಾಖೆ ನಡೆಸುತ್ತಿದೆ. ಚುನಾಯಿತ ಜನಪ್ರತಿನಿಧಿಗಳಿರದ ಹೊರತಾಗಿಯೂ ಗ್ರಾಪಂಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಿರಾತಂಕವಾಗಿ ಸಾಗಿದ್ದು, ಜನಪ್ರತಿನಿಧಿಗಳ ಅವಶ್ಯಕತೆ ಜನರಿಗೇನಿದೆ ಎಂಬ ಪ್ರಶ್ನೆ ಸಾರ್ವಜನಿಕವಲಯಲ್ಲಿ ಕೇಳಿ ಬರಲಾರಂಭಿಸಿದೆ.
ಜಿಲ್ಲೆಯ ಬೆರಳೆಣಿಕೆ ಗ್ರಾಮಪಂಚಾಯಿತಿಗಳನ್ನು ಹೊರತು ಪಡಿಸಿ ಉಳಿದ ಬಹುತೇಕ ಗ್ರಾಪಂಗಳಿಗೆ ಚುನಾವಣೆ ನಡೆಯಬೇಕಿದ್ದು, ಗ್ರಾಮ ಪಂಚಾಯಿತಿಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಆಡಳಿತ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಚುನಾಯಿತರಿಂದಲೇ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿ ಆರೋಪ: ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ, ಯೋಜನೆಗಳ ಅನುಷ್ಟಾನಕ್ಕೆ ಚುನಾಯಿತರಾಗುವ ಸದಸ್ಯರಿಂದಲೇ ಅಡ್ಡಿಯಾಗುತ್ತಿತ್ತು ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಏಕಾಏಕಿ ಕೇಳಿ ಬರಲಾರಂಭಿಸಿದೆ. ಅರ್ಹರಲ್ಲದ ತನ್ನ ಹಿಂಬಾಲಕರಿಗೆ ನೀಡಬೇಕು, ತನ್ನ ವ್ಯಾಪ್ತಿಯವರಿಗೆ ನೀಡಬೇಕು, ರಾಜಕೀಯ ವೈಷಮ್ಯದಿಂದ ಯೋಜನೆ ನೀಡಲು ಅಡ್ಡಿ, ತನ್ನ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಸೌಲಭ್ಯ ಸೀಮಿತ ಮಾಡುವ ಒತ್ತಡದಿಂದಾಗಿ ಯೋಜನೆಗಳು ಅರ್ಹರಿಗೆ ತಲುಪುತ್ತಿರಲಿಲ್ಲ ಎಂಬ ಆರೋಪ ಪ್ರಬಲವಾಗಿತ್ತು.
ಜನಪ್ರತಿನಿಧಿಗಳಿಲ್ಲದ ವೇಳೆಯೇ ಗರಿಷ್ಠ ಅಭಿವೃದ್ಧಿ: ಚುನಾವಣೆ ಸಮಯ, ನೀತಿ ಸಂಹಿತೆ ಮತ್ತಿತರ ಸಮಯಗಳಲ್ಲಿ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಹಾಗೂ ಅರ್ಹರ ಆಯ್ಕೆ ಜನಪ್ರತಿನಿಧಿ ಇಲ್ಲದ ವೇಳೆಯೇ ಗರಿಷ್ಟವಾಗಿದೆ ಎನ್ನಲಾಗುತ್ತಿದೆ. ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆಯುತ್ತಿರುವ ಪೌಷ್ಟಿಕ ಆಹಾರ ಕೈತೋಟ, ನೆನಸು ಗುಂಡಿ, ಬದು ನಿರ್ಮಾಣ, ನರೇಗಾ ಕಾಮಗಾರಿಗಳು, ಮೂಲಭೂತ ಸೌಲಭ್ಯಗಳು ರಾಜ್ಯದಲ್ಲಿಯೇ ಮಾದರಿ ಅಭಿವೃದ್ಧಿಿ ಹೊಂದಿದ್ದು ಇದಕ್ಕೆ ಜನಪ್ರತಿನಿದಿಗಳ ಹಸ್ತಕ್ಷೇಪ ಇಲ್ಲದೆ ಸ್ವತಂತ್ರವಾಗಿ ನಿರ್ಣಯ ಕೈಗೊಳ್ಳುವ ಅಧಿಕಾರ ಸಿಕ್ಕಿರುವುದು ಕಾರಣ ಎನ್ನಬಹುದಾಗಿದೆ.
ಗೊತ್ತುಗುರಿ ಇರದ ಆಡಳಿತಾಧಿಕಾರಿಗಳು: ಚುನಾಯಿತ ಅಧ್ಯಕ್ಷರಿಲ್ಲದ ಕಾರಣ ಗ್ರಾಪಂಗಳಿಗೆ ವಿವಿಧ ಇಲಾಖೆಗಳ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಆದರೆ ಕೆಲ ಇಲಾಖೆಯವರಿಗೆ ಗ್ರಾಪಂ ಆಡಳಿತದ ಗಂಧಗಾಳಿ ತಿಳಿಯದೆ ಗ್ರಾಪಂ ಸಿಬ್ಬಂದಿ ಬಸವಳಿಯುತ್ತಿದ್ದಾರೆ.
ಇನ್ನು ಕೆಲವೆಡೆ ಗ್ರಾಪಂ ಅಧಿಕಾರಿಗಳ ಅತಿರೇಕದ ವರ್ತನೆ, ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದರು ಇದರ ಹೊರತಾಗಿಯೂ ಸಹ ಗ್ರಾಮಪಂಚಾಯಿತಿ ಆಡಳಿತ ವ್ಯವಸ್ಥೆ ಯಾವುದೇ ಚುನಾಯಿತ ವ್ಯಕ್ತಿಯ ಅಡ್ಡಿ ಆತಂಕವಿಲ್ಲದೆ ನಿರಾತಂಕವಾಗಿ ಸಾಗಿದ್ದು ಅಭಿವೃದ್ಧಿ ಯೋಜನೆಗಳು ಜನರಿಗೆ ತಲುಪುತಿರುವ ಆಶಾದಾಯಕ ಬೆಳವಣಿಗೆ ಎಲ್ಲೆಡೆ ಕಂಡುಬರುತ್ತಿದೆ.

