ದೊಡ್ಡಬಳ್ಳಾಪುರ: ಕೋವಿಡ್-19 ಜನಾಂದೋಲನ ಅಭಿಯಾನವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಡಿ.ಕುಲಕರ್ಣಿ ಚಾಲನೆ ನೀಡಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ನಗರಸಭೆ, ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ತಾಲ್ಲೂಕು ಆಡಳಿತದ, ಅರೆಕಾಲಿಕ ಸ್ವಯಂ ಸೇವಕರ ಜಂಟಿ ಸಹಯೋಗದೊಂದಿಗೆ ಕೋವಿಡ್-19 ಜನಾಂದೋಲನ ಅಭಿಯಾನ ಆಯೋಜಿಸಲಾಗಿತ್ತು.
ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ನ್ಯಾಯಾಧೀಶರಾದ ಎಂ.ಡಿ.ಕುಲಕರ್ಣಿ ಅವರು, ಕರೊನಾ ಸೋಂಕು ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು. ಸ್ವಚ್ಛತೆ ಕಾಪಾಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆತ್ಮ ವಿಶ್ವಾಸ ತುಂಬುವುದರ ಜೊತೆಗೆ ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಸಂದೀಪ್ ಎ ನಾಯಿಕ್ ಮಾತನಾಡಿ, ಕರೊನಾ ಸೋಂಕು ನಿಗ್ರಹಕ್ಕೆ ಸಾರ್ವಜನಿಕರ ಪಾತ್ರ, ಕೈಗೊಳ್ಳಬೇಕಾದ ಮುಂಜಾಗ್ರತೆಯ ಅನಿರ್ವಾರ್ಯತೆಯನ್ನು ವಿವರಿಸಿದರು.
ಅಭಿಯಾನದ ಅಂಗವಾಗಿ ಪ್ರತಿಜ್ಞೆ ವಿಧಿ ಸ್ವೀಕರಿಸಲಾಯಿತು ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ ಮತ್ತಿತರಿದ್ದರು.

