ಮೈಸೂರು: ಮೈಸೂರು: ನಾಡಹಬ್ಬ ದಸರಾ ಹಿನ್ನೆಲೆ ಮೈಸೂರು ಪ್ರವಾಸಿ ತಾಣಗಳಿಗೆ ವಿಧಿಸಿದ್ದ ನಿರ್ಬಂಧವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತೆರವು ಮಾಡುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರಿಗೆ ಆದೇಶಿಸಿದ್ದಾರೆ. ಈ ಮೂಲಕ 5ನೇ ಹಂತದ ಕರೊನಾ ಲಾಕ್ಡೌನ್ ವಿನಾಯಿತಿ ಅನ್ವಯ ಪ್ರವಾಸಿ ತಾಣಗಳ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ
ನಿರ್ಬಂಧ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನಿಯೋಗದ ಮನವಿಯನ್ನ ಸಿಎಂ ಬಿಎಸ್.ಯಡಿಯೂರಪ್ಪರಿಗೆ ವಿವರಿಸಿದ್ದರು. ಇದಕ್ಕೆ ಸ್ಪಂದಿಸಿರುವ ಸಿಎಂ,ನಿರ್ಬಂಧ ತೆರವು ಮಾಡುವಂತೆ ಸ್ಥಳದಲ್ಲೇ ಡಿಸಿಗೆ ಸೂಚಿಸಿದರು.
ಈ ಮುನ್ನ ದಸರ ಭದ್ರತೆ, ಕರೊನಾ ಸೋಂಕು ನಿಯಂತ್ರಣ ಹಿನ್ನೆಲೆ ಚಾಮುಂಡಿ ಬೆಟ್ಟ, ಮೃಗಾಲಯ, ಅರಮನೆ, ಕೆಆರ್‌ಎಸ್, ನಂಜನಗೂಡು ಶ್ರೀಕಂಠೇಶ್ವರ ದೇಗುಲ, ತಲಕಾಡು ಸೇರಿದಂತೆ ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು.
ಈ ಕುರಿತು ಹೋಟೆಲ್ ಮಾಲೀಕರ ಸಂಘ, ಟ್ರಾವೆಲ್ಸ್ ಅಸೋಸಿಯೇಷನ್, ಪ್ರವಾಸಿ ಗೈಡ್ಸ್ ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಘಟನೆಗಳ ನಿಯೋಗ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ನಿರ್ಬಂಧ ತೆರವುಗೊಳಿಸುವಂತೆ ಮನವಿ ಮಾಡಿದ್ದರು.

