ದೊಡ್ಡಬಳ್ಳಾಪುರ: ಬೆಂಗಳೂರಿನ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳು ರಜಾ ದಿನಗಳಲ್ಲಿ ಮಾಲ್‌ಗಳನ್ನು ಸುತ್ತಾಡುತ್ತ ಕಾಲ ಕಳೆಯುವುದಕ್ಕಿಂತಲು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಐಟಿ ಉದ್ಯೋಗಿ ಜಿ.ರಾಜಶೇಖರ್ ಹೇಳಿದರು.
ಅವರು ತಾಲ್ಲೂಕಿನ ತೂಬಗೆರೆ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಯುಎಸ್‌ಟಿ ಗ್ಲೋಬಲ್ ಕಂಪನಿ ವತಿಯಿಂದ ಒಂದು ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಂಗಳೂರಿನಲ್ಲಿ ₹30 ಸಾವಿರ ಸಂಬಳ ಪಡೆಯುವವರು ಸೇರಿದಂತೆ ಐಟಿ ಉದ್ಯೋಗಿಗಳು ಫ್ಲಾಟ್ ಅಥವಾ ಮನೆ ಖರೀದಿಸಿ ತಮ್ಮ ಇಡೀ ಉದ್ಯೋಗವನ್ನು ಸಾಲ ತೀರಿಸುವುದರಲ್ಲೇ ಕಳೆಯುತ್ತಾರೆ. ಆದರೆ ಸರಳವಾಗಿ ಬದುಕುವುದನ್ನು ರೂಢಿಸಿಕೊಂಡು ಮನೆ ಖರೀದಿಸುವ ಬೆಲೆಗೆ ಜಮೀನು ಖರೀದಿಸಿ ಅರಣ್ಯ ಆಧಾರಿತ ಕೃಷಿಯೊಂದಿಗೆ ತಾವು ಬದುಕಿ, ಪ್ರಾಣಿ ಪಕ್ಷಿಗಳು ಜೀವಿಸಲು, ಪರಿಸರವನ್ನು ಶುದ್ದವಾಗಿಟ್ಟುಕೊಳ್ಳಲು ಪ್ರಯತ್ನಿಸಬೇಕು. ಇದರಿಂದ ನಾವು ಸದಾ ಅಭದ್ರತೆಯಿಂದ ದಿನ ಕಳೆಯುವುದು ತಪ್ಪುತ್ತದೆ ಎಂದರು.
ಯುಎಸ್‌ಟಿ ಗ್ಲೋಬಲ್ ಕಂಪನಿಯ ಸಿಎಸ್‌ಆರ್ ನಿಧಿ ಬಳಕೆ ಸಂಯೋಜಕ ಕಿರಣ್ ಮಾತನಾಡಿ, ಸಾಮಾಜಿಕ ಹೊಣೆಗಾರಿಕೆ ಯೋಜನೆಯ ಹಣವನ್ನು ಪರಿಸರದ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದೆ. ಈ ವರ್ಷ ಸಸಿಗಳನ್ನು ಬೆಳೆಸಲು ಅಗತ್ಯ ಇರುವ ಸ್ಥಳವನ್ನು ಗುರುತಿಸಿ ನೆಟ್ಟ ಸಸಿಗಳು ಬೆಳೆಯುವವರೆಗೂ ಜವಾಬ್ದಾರಿ ನೋಡಿಕೊಳ್ಳಲಾಗುತ್ತದೆ. ಹತ್ತು ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಇದರ ಜವಾಬ್ದಾರಿಯನ್ನು ತಿರುಮಲ ನರ್ಸರಿಗೆ ವಹಿಸಲಾಗಿದೆ. ಕಂಪನಿಯ ಉದ್ಯೋಗಿಗಳು ಸಹ ಸಸಿಗಳನ್ನು ನೆಡುವ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತೂಬಗೆರೆ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ದೀಕ್ಷಿತ್‌ಕುಮಾರ್, ಯುಎಸ್‌ಟಿ ಗ್ಲೋಬಲ್ ಕಂಪನಿಯ ಲತಾ, ವಿಶ್ವಾಸ್, ಶಿವಕುಮಾರ್, ಅರವಿಂದ್, ಸ್ಮೀತಾ, ತಿರುಮಲ ನರ್ಸರಿಯ ಹನುಮಂತರೆಡ್ಡಿ ಇದ್ದರು.

