ದೊಡ್ಡಬಳ್ಳಾಪುರ :ಮೈಸೂರಿನಲ್ಲಿ ದಸರಾ ಉತ್ಸವಕ್ಕೆ ಚಾಲನೆ ದೊರೆತ ಬೆನ್ನಲ್ಲೇ ದೊಡ್ಡಬಳ್ಳಾಪುರದ ಹಲವಾರು ಮನೆಗಳಲ್ಲಿಯೂ ದಸರಾ ದರ್ಬಾರ್ ಅಂದರೆ ದಸರಾ ಬೊಂಬೆಗಳನ್ನು ಕೂರಿಸುವ ಆಚರಣೆ ಆರಂಭಗೊಂಡಿದೆ. ಆದರೆ ಈ ಬಾರಿ ಕರೊನಾ ಬೊಂಬೆಗಳ ಸಂಭ್ರಮಕ್ಕೆ ತಣ್ಣೀರೆರೆಚಿದ್ದು, ಎಲ್ಲೆಡೆ ಸರಳ ಆಚರಣೆ ಕಂಡು ಬರುತ್ತಿದೆ.
ಹಿಂದಿನ ವರ್ಷಗಳಲ್ಲಿ ಪ್ರತಿದಿನ ಸಂಜೆಯಾಗುತ್ತಿದ್ದಂತೆಯೇ ಬೊಂಬೆ ಕೂರಿಸುವವರ ಮನೆಗಳಿಗೆ ಚಿಣ್ಣರು ಬೊಂಬೆ ಸಂಭ್ರಮ ಕಣ್ತುಂಬಿಕೊಳ್ಳಲು ಲಗ್ಗೆ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆದರೆ ಈಗ ಬೊಂಬೆಗಳನ್ನು ಸಾಂಕೇತಿಕವಾಗಿ ಕೂಡಿಸಿ, ದಸರಾ ಆಚರಣೆ ಮಾಡಲಾಗುತ್ತಿರುವುದರಿಂದ ಸಂಭ್ರಮ ಕಡಿಮೆಯಾಗಿದೆ.
ಬೊಂಬೆ ಹಬ್ಬ ಆಚರಣೆ: ನವರಾತ್ರಿಯ ಒಂಬತ್ತು ದಿನ ನಡೆಯುವ ಬೊಂಬೆ ಹಬ್ಬದಲ್ಲಿ ಕಳಸ ಸ್ಥಾಪನೆ ಮಾಡಿ ಪ್ರತಿನಿತ್ಯ ನೇವೇದ್ಯದೊಂದಿಗೆ ಶ್ರದ್ಧಾ ಭಕ್ತಿಗಳ ಪೂಜೆ ಸಮರ್ಪಣೆಯಾಗುತ್ತದೆ. ಮನೆಗೆ ಬಂದ ಮಾನಿನಿಯರಿಗೆ ಬಾಗಿನ, ಬೊಂಬೆ ಮನೆಗಳಲ್ಲಿ ಬಂಧು ಮಿತ್ರರ ಸಂಭ್ರಮ, ಮೊದಲಾಗಿ ಬೊಂಬೆ ಹಬ್ಬದ ಸಂಭ್ರಮ ಕಾಣ ಬರುತ್ತಿದೆ. ವಿವಿಧ ದೇವಾನುದೇವತೆಗಳ ಬೊಂಬೆಗಳೊಂದಿಗೆ ಕೈಲಾಸ ಶಿವದರ್ಶನ, ತಿರುಪತಿ ಬ್ರಹ್ಮೋತ್ಸವ, ಶ್ರೀ ಕೃಷ್ಣ ಪಾರಿಜಾತ, ದಶಾವತಾರ,ತಿರುಪತಿ, ಗರುಡೋತ್ಸವ, ಮದುವೆ ದಿಬ್ಬಣದ ಬೊಂಬೆಗಳು, ಕುಂಬಕರ್ಣನ ನಿದ್ರಾಭಂಗ, ಪಟ್ಟದಲ್ಲಿ ಕುಳಿತಿದ್ದರೆ, ದಸರಾ ಮೆರವಣಿಗೆ, ಮೈಸೂರು ಅರಮನೆ,ಗ್ರಾಮೀಣ ಚಿತ್ರಣ, ಉದ್ಯಾನವನ, ಮೃಗಾಲಯ, ಕಾಡು, ಕೈಲಾಸ ಪರ್ವತ,ಅರಮನೆ,ದೇವಾಲಯ ಮೊದಲಾದ ವಿಶೇಷ ಆಯೋಜನೆಗಳು ಆಕರ್ಷಣೆಯಾಗಿವೆ. ಬೊಂಬೆಗಳಿಗೆ ಕಲಾತ್ಮಕ ಕುಸುರಿ ಕೆಲಸಗಳು ನಡೆಯುತ್ತವೆ. ನಂತರ ಬೊಂಬೆ ಜೋಡಿಸುವ ಕಾರ್ಯದಲ್ಲಿ ಕುಟುಂಬದವರೊಂದಿಗೆ ಸಮಾಲೋಚನೆ.ಯಾವ ಬೊಂಬೆ ಎಲ್ಲಿಡಬೇಕು. ನಂತರ ಎಲ್ಲವೂ ಅಣಿಗೊಳಿಸಿದ ನಂತರ ಪೂಜಾ ಕಾರ್ಯ, ಮಾನಿನಿಯರಿಗೆ ಮಕ್ಕಳಿಗೆ ಬಾಗಿನ ಮೊದಲಾಗಿ ವಿವಿಧ ಸಂಪ್ರದಾಯಗಳು ನಡೆಯುತ್ತವೆ.
ನಗರದ ಟಿ.ಎಸ್.ಉಮಾದೇವಿ ಮಹದೇವಯ್ಯ, ಪ್ರಭಾವತಿ ದಯಾಶಂಕರ್, ಶ್ರೀನಿವಾಸ ರಾಘವನ್, ನಟರಾಜ್, ಮಂಜುಳಾ ಮಂಜುನಾಥ್, ರವಿಶಂಕರ್, ಮಂಜಣ್ಣ, ಲಕ್ಷ್ಮೀ ಶ್ರೀನಿವಾಸಯ್ಯ, ಪುಷ್ಪಾ ಶಿವಶಂಕರ್,ಕಣಿತಹಳ್ಳಿ ದೇವರಾಜ್ ಮೊದಲಾದವರ ಮನೆಗಳಲ್ಲಿ ಬೊಂಬೆಗಳನ್ನು ಕೂಡಿಸುವ ಆಚರಣೆ ನಡೆಯುತ್ತಿದೆ.
ಕರೊನಾದಿಂದ ಸರಳ ಆಚರಣೆ: ನಮ್ಮ ಸಂಸ್ಕೃತಿ ಪರಂಪರೆಗಳ ಪ್ರತೀಕವಾದ ಇಂತಹ ಪಾರಂಪರಿಕ ಕಲೆಗಳನ್ನು ಉಳಿಸಿ ಬೆಳೆಸಬೇಕಿದೆ. ಈ ಬಾರಿ ಸರ್ಕಾರದ ವತಿಯಿಂದ ನಾಡಹಬ್ಬ ದಸರಾ ಸಹ ಸರಳವಾಗಿ ಆಚರಿಸಲಾಗುತ್ತಿದೆ, ಪ್ರತಿ ವರ್ಷ ವಿಜೃಂಭಣೆಯಿಂದ ಬೊಂಬೆ ಹಬ್ಬ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕರೊನಾ ಪರಿಣಾಮದಿಂದಾಗಿ, ಸರಳವಾಗಿ ಆಚರಿಸಲಾಗುತ್ತಿದೆ. ದಸರಾ ಬೊಂಬೆಗಳನ್ನು ನೋಡಲು ಹೆಚ್ಚು ಜನ ಮಕ್ಕಳೇ ಬರುವುದರಿಂದ, ಕೊವಿಡ್-19 ಸೋಂಕು ಹೆಚ್ಚಾಗಿ ಹರಡುವ ಸಂಭವವಿದೆ. ಈ ಹಿನ್ನಲೆಯಲ್ಲಿ ಸಾಂಕೇತಿಕವಾಗಿ ಬೊಂಬೆಗಳನ್ನು ಕಡಿಮೆ ಪ್ರಮಾಣದಲ್ಲಿ ಇಟ್ಟು ಪೂಜೆ ಸಲ್ಲಿಸಲಾಗುತ್ತಿದೆ. ನವರಾತ್ರಿಯಲ್ಲಿ ಶಕ್ತಿದೇವತೆಗಳ ಆರಾಧನೆಯಿಂದಾಗಿ ಕೊರೊನಾ ಸಂಕಷ್ಟ ದೂರವಾಗಿ ಹಬ್ಬ, ಸಾಂಪ್ರದಾಯಿಕ ಆಚರಣೆಗಳು ಎಂದಿನಂತೆ ನಡೆಯಲಿ ಎಂದು ಪ್ರಾರ್ಥಿಸುತ್ತೇವೆ ಎನ್ನುತ್ತಾರೆ ನಗರದ ವರಲಕ್ಷ್ಮೀದೇವರಾಜ್ ಹಾಗೂ ಲಕ್ಷ್ಮೀ ಶ್ರೀನಿವಾಸಯ್ಯ.

