ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಹಿಳಾ ಕಿಸಾನ್ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೃಷಿಯಲ್ಲಿ ಮಹಿಳೆಯರ ಪಾತ್ರದ ಮಹತ್ವ ಕುರಿತು ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಚಿತ್ರ, ಬೇಸಾಯದ ಪ್ರತಿಯೊಂದು ಹಂತದಲ್ಲಿಯೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಕೃಷಿಯ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕಿದೆ. ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದ್ದು, ಕೃಷಿ ಉಪಕಸುಬುಗಳಲ್ಲಿಯೂ ಮಹಿಳೆಯರ ಪಾತ್ರ ಗಣನೀಯ. ಇಂತಹ ರೈತ ಮಹಿಳೆಯರನ್ನು ಗೌರವಿಸುವ ನಿಟ್ಟಿನಲ್ಲಿ ರೈತ ಮಹಿಳಾ ದಿನಾಚರಣೆ ಪ್ರಸ್ತುತವಾಗಿದೆ. ಮಹಿಳೆಯರು ಕೃಷಿಯೇತರ ಚಟುವಟಿಕೆಗಳಾದ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಉತ್ತಮ ಲಾಭ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತ ಮಹಿಳೆಯರಿಗೆ ಮೌಲ್ಯವರ್ಧಿತ ರಾಗಿ ಉತ್ಪನ್ನಗಳಾದ ಚಕ್ಕುಲಿ, ಲಡ್ಡು, ಬಿಸ್ಕೆಟ್, ಮಿಕ್ಸ್‍ಚರ್ ಇವುಗಳ ತಯಾರಿಕೆಯ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ದೀಪ ಸೇರಿದಂತೆ ರೈತ ಮಹಿಳೆಯರು ಭಾಗವಹಿಸಿದ್ದರು.

