ದೊಡ್ಡಬಳ್ಳಾಪುರ: ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಸಂಗೀತ ನಿರ್ದೇಶಕ ರಾಜನ್ ಅವರಿಗೆ ತಾಲೂಕಿನ ವಾದ್ಯಗೋಷ್ಟಿ ಕಲಾವಿದರಿಂದ ನುಡಿ ನಮನ ಮತ್ತು ಸ್ವರ ಸಿಂಚನ ಕಾರ್ಯಕ್ರಮವನ್ನು ನಗರದ ರಾಜ್‍ಕುಮಾರ್ ಕಲಾಭವನದಲ್ಲಿ ಆಯೋಜಿಸಲಾಗಿತ್ತು.
ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿರುವ ಹಾಗೂ ಸಂಗೀತ ನಿರ್ದೇಶಕ ರಾಜನ್ ಸಂಗೀತ ಸಂಯೋಜಿಸಿರುವ ಗೀತೆಗಳನ್ನು ವಾದ್ಯಗೋಷ್ಟಿ ಕಲಾವಿದರು ಹಾಡುವ ಮೂಲಕ ನಮನ ಸಲ್ಲಿಸಿದರು. ಜೆ.ಡಿ.ಎಸ್.ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ಇಡೀ ಜಗತ್ತಿನಲ್ಲಿ ಯಾರೂ ಮಾಡದ ಸಾಧನೆಯನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ ಮಾಡಿದ್ದಾರೆ. ಅವರ ಕಂಠಸಿರಿಯಿಂದ ಹೊರಬಂದ ಸಾವಿರಾರು ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. ಹಾಡುಗಳು ಇರುವವರೆಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಜೀವಂತವಾಗಿರುತ್ತಾರೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಟಿ.ಎನ್.ಪ್ರಭುದೇವ್ ಮಾತನಾಡಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾಯನ ಕ್ಷೇತ್ರದಲ್ಲಿ ದಂತಕಥೆ. ಸಂಗೀತ ನಿರ್ದೇಶಕ ರಾಜನ್ ಅವರದ್ದು, ಸಂಗೀತ ನಿರ್ದೇಶನದಲ್ಲಿ ಅಪ್ರತಿಮ ಸಾಧನೆಯಾಗಿದೆ. ಸಹೋದರ ನಾಗೇಂದ್ರ ಅವರ ಜೊತೆಗೂಡಿ ಅವರು 300 ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಸಂಗೀತ ನೀಡಿದ್ದಾರೆ ಅವರು ಕನ್ನಡ ನಾಡಿನವರಾಗಿದ್ದರು ಎನ್ನುವುದು ಹೆಮ್ಮೆಯ ವಿಚಾರ ಎಂದರು.
ಕಾರ್ಯಕ್ರಮದ ಪ್ರೋತ್ಸಾಹಕರಾದ ಜನಪರ ಚಂದ್ರು, ಆರ್.ಸೋಮಶೇಖರ್, ವಾದ್ಯಗೋಷ್ಟಿ ಕಲಾವಿದರಾದ ರಾಮಕೃಷ್ಣ,ಬಿ.ನರಸಿಂಹಮೂರ್ತಿ,ಕಲಾವಿದ ಕೆಂಪಣ್ಣ, ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೊಡ್ಡ ನಂಜುಂಡಪ್ಪ,ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಎ.ಸಿ.ಅಶೋಕ್, ತಾಲೂಕು ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ನಾಗರಾಜು, ಶಿವರಾಜ್‍ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಚೌಡರಾಜ್, ತಾಲೂಕು ಶಿವರಾಜ್‍ಕುಮಾರ್ ಸೇನಾ ಸಮಿತಿ ಅಧ್ಯಕ್ಷ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

