ದೊಡ್ಡಬಳ್ಳಾಪುರ: ಕರೊನಾ ಲಾಕ್ಡೌನ್ನಿಂದಾಗಿ ಕಳೆದ ಏಳು ತಿಂಗಳಿಂದ ಬಂದ್ ಆಗಿದ್ದ ಕಾಲೇಜುಗಳು ಇಂದು ಆರಂಭವಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಮರಳಿದ್ದಾರೆ.
ನಗರದ ಮಾದಗೊಂಡನಹಳ್ಳಿ ರಸ್ತೆಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶೇ.60 ರಷ್ಟು ವಿದ್ಯಾರ್ಥಿಗಳು ಈಗಾಗಲೇ ಹಾಜರಾಗಿದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೆ ಹೂವನ್ನು ನೀಡಿ ಸ್ವಾಗತ ಕೋರಿದರು.
ವಿದ್ಯಾರ್ಥಿಗಳಿರದೆ ಬಿಕೋ ಎನ್ನುತ್ತಿದ್ದ ಕಾಲೇಜು ರಸ್ತೆಯಲ್ಲಿ ವಿದ್ಯಾರ್ಥಿ / ವಿದ್ಯಾರ್ಥಿನಿಯರು ಬನ್ನಿ ನನ್ನ ಗೆಳಯರೆ, ಬನ್ನಿ ನನ್ನ ಗೆಳೆತಿಯರೆ ಓಗೋಣಾ ಕಾಲೇಜಿಗೆ ಎಂಬ ಗೀತೆಯನ್ನು ಗುನುಗುತ್ತಾ ಸ್ನೇಹಿತರನ್ನು ಭೇಟಿಯಾಗುವ ಸಂಭ್ರಮದಿಂದ ತೆರಳುತ್ತಿದ್ದ ದೃಶ್ಯ ಕಂಡುಬಂತು.
ಕಾಲೇಜಿಗೆ ಬಂದಿರುವ ವಿದ್ಯಾರ್ಥಿಗಳಿಗೆ ಕೋವಿಡ್-19 ಟೆಸ್ಟ್ ಮಾಡಲಾಗುತ್ತಿದ್ದು. ಎರಡು ವೈದ್ಯಕೀಯ ತಂಡ ಪರೀಕ್ಷೆ ನಡೆಸುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸಯ್ಯ ಹರಿತಲೇಖನಿಗೆ ತಿಳಿಸಿದ್ದಾರೆ.
ಇಂದಿನಿಂದ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮಾ ಕಾಲೇಜುಗಳನ್ನು ಸರಕಾರದ ತೀರ್ಮಾನದ ಮೇರೆಗೆ ರಾಜ್ಯಾದ್ಯಂತ ಪ್ರಾರಂಭವಾಗಿದ್ದು, ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಸೋಮವಾರದಿಂದ ಆರಂಭಿಸುತ್ತಿವೆ.
ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಆರಂಭಿಕವಾಗಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಭೌತಿಕ ತರಗತಿಗೆ ಹಾಜರಾಗಲು ಅವಕಾಶ ನೀಡಲಾಗಿದೆ. ಕೊಠಡಿ, ಮೇಜು, ಕುರ್ಚಿ ಸೇರಿದಂತೆ ಎಲ್ಲಾ ಪರಿಕರಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿಸಲಾಗಿದೆ.
ಇದೇ ವೇಳೆ ಭೌತಿಕ ತರಗತಿಗಳಿಗೆ ಹಾಜರಾಗಲು ಇಷ್ಟವಿಲ್ಲದ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳಿಗೆ ಅವಕಾಶ ಕಲ್ಪಿಸಿದೆ. ಈ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರ ಪಡೆದು ತರಗತಿಗಳಿಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

