ದೊಡ್ಡಬಳ್ಳಾಪುರ: ಮರಾಠ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ನಗರದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ, ಮರಾಠ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆಗೆ ಆದೇಶ ಹೊರಡಿಸಿ 50 ಕೋಟಿ ಹಣವನ್ನು ಮೀಸಲಿಟ್ಟಿರುವುದು ಇಡೀ ನಾಡಿನ ಕನ್ನಡಿಗರಿಗೆ ಮಾಡಿರುವ ವಂಚನೆ ಹಾಗೂ ಅವಮಾನವಾಗಿದೆ. ಬೆಳಗಾವಿಯಲ್ಲಿ ಎಂ.ಇ.ಎಸ್ ಸಂಘಟನೆಯನ್ನು ಕಟ್ಟಿಕೊಂಡು ಸದಾ ಒಂದಿಲ್ಲೊಂದು ತಂಟೆ ತಕರಾರು ಮಾಡುತ್ತಾ, ಪ್ರತಿ ಕನ್ನಡದ ಕೆಲಸಗಳಿಗೂ ಅಡ್ಡಗಾಲಾಕುತ್ತಾ ಕನ್ನಡ ವಿರೋಧಿತನವನ್ನೇ ಮೈಗೂಡಿಸಿಕೊಂಡು ಇಡೀ ನಾಡೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ ಗಡಿ ನಾಡಲ್ಲಿ ಅದೇ ನವೆಂಬರ್ ಒಂದನೇ ತಾರೀಖು ಕರಾಳ ದಿನವೆಂದು ಕಪ್ಪು ಪಟ್ಟಿ ಧರಿಸಿ ಕನ್ನಡ ನಾಡಿನ ಜನರ ಭಾವನೆ ಗಳನ್ನು ಕೆರಲಿಸುತ್ತಾ ವಿಧಾನ ಸಭೆಯಲ್ಲಿ ನಮ್ಮ ಕರ್ನಾಟಕ ಸರ್ಕಾರದ ಶವಯಾತ್ರೆ ಮಾಡುತ್ತಾ ನಮ್ಮದೇ ನಾಡಲ್ಲಿ ನಮ್ಮದೇ ಹೆಮ್ಮೆಯ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಲು ಅಡ್ಡಿ ಪಡಿಸಿದ ಮರಾಠಿಗರಿಗೆ ಪ್ರಾಧಿಕಾರ ಸ್ಥಾಪಿಸಿ ಎಂಥಹ ಸಂದೇಶ ರವಾನಿಸಲು ಹೊರಟಿದ್ದೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದ ಅವರು ಈ ನಿಲುವು ಪರೋಕ್ಷವಾಗಿ ಎಂ.ಇ.ಎಸ್ ಪುಂಡರಿಗೆ ಬೆಂಬಲ ನೀಡುವಂತಿಲ್ಲವೇ..? ನಾಡನ್ನು ವಿಭಜಿಸುವಂತಹ ಮಾತನಾಡುವ ದ್ರೋಹಿಗಳಿಗೆ ಸರ್ಕಾರದ ಈ ಸಹಕಾರದಿಂದ ಬಲ ಬಂದಂತಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ತಾಲೂಕು ಅಧ್ಯಕ್ಷ ಹೆಚ.ಎಸ್.ವೆಂಕಟೇಶ್ ಮಾತನಾಡಿ, ಯಾವ ಪುರುಷಾರ್ಥಕ್ಕಾಗಿ ಈಗ ಮರಾಠ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ ಎಂಬ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ,ಮರಾಠ ಪ್ರಾಧಿಕಾರಕ್ಕೆ 50 ಕೋಟಿ ಏಕೆ. ಇದೇ ರೀತಿ ಆದರೆ ತಮಿಳರ, ಮಲಯಾಳಿಗಳ, ತೆಲುಗರ, ಮಾರ್ವಾಡಿಗಳ, ಗುಜುರಾತಿಗಳ ಇತರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಒತ್ತಡ ಹೆಚ್ಚುತ್ತವೆ ರಾಜಕೀಯ ಲಾಭಕೋಸ್ಕರ ಈ ರೀತಿ ಕ್ರಮ ಖಂಡನೀಯ. ಕನ್ನಡ ಪ್ರಾಧಿಕಾರದ ಸಲಹೆಗಳನ್ನು ಎಷ್ಟು ಅನುಷ್ಠಾನ ಗೊಳಿಸಿದ್ದೀರಿ..ಕಾರ್ಮಿಕರಿಗೆ ಸಂಬಳ ಕೊಡಲು ಹಣವಿಲ್ಲ ಹಾಗೂ ಪ್ರವಾಹ ಪೀಡಿತರಿಗೆ ಎಷ್ಟು ಹಣ ಬಿಡುಗಡೆ ಗೊಳಿಸಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಎಲ್ಲಾ ಪ್ರಶ್ನೆಗಳು ನೈಜ ಕನ್ನಡಿಗರನ್ನು ಕಾಡುತ್ತಿವೆ ಆದುದರಿಂದ ಈ ಕೂಡಲೇ ನಾಡಿನ ಸಮಸ್ತ ಜನರ ಅನುಮಾನಗಳನ್ನು ಬಗೆಹರಿಸಿ ಕೂಡಲೇ ನಮ್ಮ ನಾಡ ಹಿತಕ್ಕೆ ವಿರೋಧವಿರುವ ನಿಮ್ಮ ಆದೇಶವನ್ನು ಹಿಂಪಡೆದುಕೊಳ್ಳಿ ಇಲ್ಲವಾದಲ್ಲಿ ಸಮಸ್ತ ಕನ್ನಡಿಗರು ಬೀದಿಗಿಳಿದು ಉಗ್ರ ಹೋರಾಟವನ್ನ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್.ಎಲ್.ಎನ್ ವೇಣು, ಗೌರವ ಅಧ್ಯಕ್ಷ ಪು.ಮಹೇಶ್, ನಗರ ಅಧ್ಯಕ್ಷ ಶ್ರೀನಗರ ಬಷೀರ್, ಸದಸ್ಯರಾದ ಎನ್.ರವಿ, ಸೂರಿ, ಪವನ್ ಮತ್ತಿತರಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

