ಬೆಂಗಳೂರು: ರಾಜ್ಯ ಚುನಾವಣಾ ಆಯೋಗವು ರಾಜ್ಯದಲ್ಲಿ ಅವಧಿ ಮುಕ್ತಾಯವಾಗಿರುವ 5762 ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ವೇಳಾಪಟ್ಟಿ ಪ್ರಕಟಗೊಳಿಸಿದ್ದು, ಅದರಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಟ್ಟು 102 ಗ್ರಾಮ ಪಂಚಾಯಿತಿಗಳ ಪೈಕಿ ಅವಧಿ ಪೂರ್ಣಗೊಳ್ಳದಿರುವ 09 ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ 93 ಗ್ರಾಮ ಪಂಚಾಯಿತಿಗಳಿಗೆ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದ್ದು, ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2020ರ ನವೆಂಬರ್ 30 ರಿಂದ ಡಿಸೆಂಬರ್ 31 ರ ಸಂಜೆ 5-00 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆಯು ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ನಗರ ಪಾಲಿಕೆ, ಮಹಾನಗರ ಪಾಲಿಕೆ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್.ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್-19ರ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದ ಚುನಾವಣೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ 26 ಗ್ರಾಮ ಪಂಚಾಯಿತಿಗಳು ಹಾಗೂ ನೆಲಮಂಗಲ ತಾಲ್ಲೂಕಿನ 21 ಗ್ರಾಮ ಪಂಚಾಯಿತಿಗಳಲ್ಲಿ ನಡೆಯಲಿದೆ. 2020ರ ಡಿಸೆಂಬರ್ 07 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನವಾಗಿದ್ದು, ಡಿಸೆಂಬರ್ 11 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಡಿಸೆಂಬರ್ 12 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದ್ದು, ಡಿಸೆಂಬರ್ 14 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ, ಡಿಸೆಂಬರ್ 22 ರಂದು ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನ ಅಗತ್ಯ ಇದ್ದಲ್ಲಿ ಡಿಸೆಂಬರ್ 24 ರಂದು ಮತದಾನ ನಡೆಯಲಿದೆ. ಡಿಸೆಂಬರ್ 30 ರಂದು ಬೆಳಿಗ್ಗೆ 8.00 ಗಂಟೆಯಿಂದ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಡಿಸೆಂಬರ್ 31 ರಂದು ಚುನಾವಣಾ ಮಾದರಿ ನೀತಿ ಸಂಹಿತೆ ಮುಕ್ತಾಯಗೊಳ್ಳಲಿದೆ.
ಎರಡನೇ ಹಂತದ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ 26 ಗ್ರಾಮ ಪಂಚಾಯಿತಿಗಳು ಹಾಗೂ ದೇವನಹಳ್ಳಿ ತಾಲ್ಲೂಕಿನ 20 ಗ್ರಾಮ ಪಂಚಾಯಿತಿಗಳಲ್ಲಿ ನಡೆಯಲಿದೆ. 2020ರ ಡಿಸೆಂಬರ್ 11 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನವಾಗಿದ್ದು, ಡಿಸೆಂಬರ್ 16 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಡಿಸೆಂಬರ್ 17 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದ್ದು, ಡಿಸೆಂಬರ್ 19 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ, ಡಿಸೆಂಬರ್ 27 ರಂದು ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನ ಅಗತ್ಯ ಇದ್ದಲ್ಲಿ ಡಿಸೆಂಬರ್ 29 ರಂದು ಮತದಾನ ನಡೆಯಲಿದೆ. ಡಿಸೆಂಬರ್ 30 ರಂದು ಬೆಳಿಗ್ಗೆ 8.00 ಗಂಟೆಯಿಂದ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಡಿಸೆಂಬರ್ 31 ರಂದು ಚುನಾವಣಾ ಮಾದರಿ ನೀತಿ ಸಂಹಿತೆ ಮುಕ್ತಾಯಗೊಳ್ಳಲಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 04 ತಾಲ್ಲೂಕುಗಳಿದ್ದು, ಒಟ್ಟು 102 ಗ್ರಾಮ ಪಂಚಾಯಿತಿಗಳ ಪೈಕಿ 93 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 799 ಮೂಲ ಮತಗಟ್ಟೆಗಳಿದ್ದು, 87 ಆಕ್ಸಿಲರಿ ಮತಗಟ್ಟೆಗಳು ಸೇರಿದಂತೆ ಒಟ್ಟು 886 ಮತಗಟ್ಟೆಗಳಿವೆ.
ಜಿಲ್ಲೆಯಲ್ಲಿ 2,61,776 ಪುರುಷ ಮತದಾರರು, 2,58,831 ಮಹಿಳಾ ಮತದಾರರು ಹಾಗೂ ಇತರೆ ವರ್ಗಕ್ಕೆ ಸೇರಿದ 42 ಮತದಾರರಿದ್ದು, ಒಟ್ಟು 520649 ಮತದಾರರಿದ್ದಾರೆ.
ಸದಾಚಾರ ನೀತಿ ಸಂಹಿತೆಯಂತೆ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿಗಳು ಸಾಮಾನ್ಯ ಸಭೆಯನ್ನು ನಡೆಸಲು ನೀತಿ ಸಂಹಿತೆಯು ಅಡ್ಡಿಯಿರುವುದಿಲ್ಲ. ಆದರೆ, ಸದರಿ ಸಭೆಯಲ್ಲಿ ಯಾವುದೇ ಹೊಸ ಯೋಜನೆಗಳ ಅನುಷ್ಠಾನದ ಬಗ್ಗೆ ತೀರ್ಮಾನ ತೆಗೆದುಕೊಳ್ಳತಕ್ಕದ್ದಲ್ಲ. ಈಗಾಗಲೇ ಆಯವ್ಯಯ ಒದಗಿಸಿರುವ ಯೋಜನೆಗಳನ್ನು ಪ್ರಾರಂಭಿಸಲು ಅಥವಾ ಪ್ರಾರಂಭವಾಗಿದ್ದಲ್ಲಿ, ಕೆಲಸ ಮುಂದುವರಿಸಲು ಯಾವುದೇ ಬಾಧಕವಿಲ್ಲ.
ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಥವಾ ಈ ಯೋಜನೆಯಡಿ ಇತರ ಕಾಮಗಾರಿಗಳನ್ನು ತೆಗೆದುಕೊಂಡು ಅನುಷ್ಠಾನಗೊಳಿಸಲು ನೀತಿ ಸಂಹಿತೆಯ ಅಡ್ಡಿಯಿರುವುದಿಲ್ಲ. ಆದರೆ ಇಂತಹ ಯೋಜನೆಯ ಅನುಷ್ಠಾನವನ್ನು ಸಾರ್ವಜನಿಕ ಸಮಾರಂಭ ಅಥವಾ ರಾಜಕೀಯ ನಾಯಕರುಗಳ ಉಪಸ್ಥಿತಿಯಲ್ಲಿ ನಡೆಸುವುದನ್ನು ನಿಷೇಧಿಸಲಾಗಿದೆ.
ನೆರೆ ಪೀಡಿತ ಹಾಗೂ ಪ್ರಕೃತಿ ವಿಕೋಪ ಪೀಡಿತ ಜನ ಸಮುದಾಯಕ್ಕೆ ನೀಡಲಾಗುವ ಯಾವುದೇ ಪರಿಹಾರ ಅಥವಾ ಸೌಲಭ್ಯಗಳಿಗೆ ನೀತಿ ಸಂಹಿತೆಯು ಅಡ್ಡಿಯಾಗುವುದಿಲ್ಲ.
ಗ್ರಾಮ ಪಂಚಾಯತಿ ಚುನಾವಣೆಗಳು ಪಕ್ಷ ರಹಿತವಾಗಿ ನಡೆಯುವುದರಿಂದ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಮತ್ತು ರಾಜಕೀಯ ಮುಖಂಡರ ಭಾವಚಿತ್ರಗಳನ್ನು ಉಪಯೋಗಿಸಿ ಪ್ರಚಾರ ಮಾಡಕೂಡದೆಂದು ಅಭ್ಯರ್ಥಿಗಳಿಗೆ ತಿಳಿಸಲಾಗುವುದು. ಒಂದು ವೇಳೆ ಅಂತಹ ಪ್ರಚಾರ ನಡೆಸಿದ್ದಲ್ಲಿ ಅಭ್ಯರ್ಥಿಯು ಮುದ್ರಿಸಿರುವ ಕರಪತ್ರ, ಪೋಸ್ಟರ್ ಅಥವಾ ಇನ್ಯಾವುದೇ ಪ್ರಚಾರ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
ಯಾವುದೇ ಸಾಂಸ್ಕøತಿಕ ಹಾಗೂ ಧಾರ್ಮಿಕ ಸಭೆ ಮತ್ತು ಸಮಾರಂಭಗಳನ್ನು ನಡೆಸಲು ನೀತಿ ಸಂಹಿತೆಯು ಅಡ್ಡಿಯಿಲ್ಲ. ಆದರೆ ಇಂತಹ ಸಭೆ ಸಮಾರಂಭಗಳಲ್ಲಿ ರಾಜಕೀಯ ವ್ಯಕ್ತಿಗಳು ಭಾಗವಹಿಸಿ ನೀತಿ ಸಂಹಿತೆಗೆ ಬಾಧಕವಾಗುವ ರೀತಿಯಲ್ಲಿ ಮತದಾರರ ಮೆಲೆ ಪರಿಣಾಮ ಬೀರುವಂತಹ ಯಾವುದೇ ಘೋಷಣೆ, ಹೇಳಿಕೆ ಅಥವಾ ಆಶ್ವಾಸನೆ ಇತ್ಯಾದಿಗಳನ್ನು ಮಾಡುವಂತಿಲ್ಲ.
ವಿಧಾನಮಂಡಲ ಮತ್ತು ಸಂಸತ್ ಸದಸ್ಯರುಗಳಿಗೆ ಜಿಲ್ಲಾ ಮಟ್ಟದಲ್ಲಿ ಅಥವಾ ತಾಲ್ಲೂಕು ಮಟ್ಟದಲ್ಲಿ ಅವರ ಸಾಮಾನ್ಯ ಕರ್ತವ್ಯ ನಿರ್ವಹಣೆಗೆ ಒದಗಿಸಲಾಗಿರುವ ವಾಹನವನ್ನು ವಶಕ್ಕೆ ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ. ಆದರೆ ಚುನಾವಣಾ ಪ್ರಚಾರಗಳಿಗೆ ಅಥವಾ ಚುನಾವಣಾ ಸಂಬಂಧದ ಸಭೆಗಳನ್ನು ನಡೆಸಲು ಸರ್ಕಾರಿ ವಾಹನಗಳನ್ನು ಅವರು ಬಳಸಿದ್ದಲ್ಲಿ ಅವುಗಳನ್ನು ತಕ್ಷಣ ವಶಪಡಿಸಿಕೊಳ್ಳಲಾಗುವುದು.
ಯಾವುದೇ ನೇಮಕಾತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭಗೊಂಡಿದ್ದರೆ ಅದನ್ನು ನಿಲ್ಲಿಸುವ ಅಗತ್ಯವಿರುವುದಿಲ್ಲ. ಆದರೆ ನೇಮಕಾತಿಯನ್ನು ಈ ಸಮಯದಲ್ಲಿ ಅಂತಿಮಗೊಳಿಸಿ ನೇಮಕಾತಿ ಆಯ್ಕೆ ಪಟ್ಟಿ ಪ್ರಕಟಗೊಳಿಸಬಾರದು.
ಒಟ್ಟಿನಲ್ಲಿ “ಮತದಾರರ ಮೇಲೆ ಪ್ರಭಾವ” ಬೀರುವಂತಹ ಯಾವುದೇ ಸರ್ಕಾರಿ ಕಾರ್ಯಕ್ರಮ ಅಥವಾ ಯೋಜನೆಯು ನಡೆಯುವಂತಿಲ್ಲ.
ಜಿಲ್ಲಾ ಮಟ್ಟದಲ್ಲಿ/ ತಾಲ್ಲೂಕು ಮಟ್ಟದಲ್ಲಿ ಪಡಿತರ ಚೀಟಿ ವಿತರಣೆ, ಗ್ರಾಮೀಣ ಭಾಗಗಳಿಗೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಂತಹ ವಿಷಯಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಭೆಗಳನ್ನು ಸಚಿವರು/ ಶಾಸಕರು ಮತ್ತು ಅಧಿಕಾರಿಗಳು ನಡೆಸುವುದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ.
ಯಾವುದೇ ತಾತ್ಕಾಲಿಕ ಹುದ್ದೆಗಳಿಗೆ ನೇಮಕಾತಿ ಮಾಡಲು ಅವಕಾಶವಿರುವುದಿಲ್ಲ. ಆದರೆ ಯಾವುದಾದರೂ ತುರ್ತು ಸೇವೆಗೆ ನೇಮಕಾತಿ ಅವಶ್ಯಕವಿದ್ದಲ್ಲಿ ಆಯೋಗದ ಅನುಮೋದನೆ ಪಡೆದು ನೇಮಕಾತಿ ಮಾಡಬಹುದು.
ಯಾವುದೇ ಇಲಾಖೆಯಲ್ಲಿ ಸಾಮಾನ್ಯ ಮುಂಬಡ್ತಿಯನ್ನು ನೀಡಲು ಯಾವುದೇ ಬಾಧಕವಿರುವುದಿಲ್ಲ.
ಚುನಾವಣೆಗಳಿಗೆ ನಿಯೋಜಿಸಿದ ಯಾವುದೇ ಸಿಬ್ಬಂದಿಯ ವರ್ಗಾವಣೆಯನ್ನು ಮಾಡುವಂತಿಲ್ಲ.
ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ “ಜನ ಸ್ಪಂದನ ಸಭೆ” ನಡೆಸುವಂತಿಲ್ಲ.
ಭೂನ್ಯಾಯ ಮಂಡಳಿ ಸಮಿತಿ ಸಭೆಗಳನ್ನು (ಟ್ರಿಬ್ಯೂನಲ್) ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ನಡೆಸುವಂತಿಲ್ಲ.
ಮಂತ್ರಿಗಳು ಅಥವಾ ಶಾಸಕರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ ಸಭೆ ಮತ್ತು ಇತರ ಸಭೆಗಳನ್ನು ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ನಡೆಸುವಂತಿಲ್ಲ.
ಪಂಚಾಯತಿಗಳು ಚುನಾವಣಾ ಪೂರ್ವದಲ್ಲಿ ಪ್ರಾರಂಭಿಸಿರುವ / ಜಾರಿಯಲ್ಲಿರುವ ಕಾಮಗಾರಿಗಳ ಸಂಬಂಧ ಪಂಚಾಯಿತಿಯ ಹಣವನ್ನು ಪಾವತಿ ಮಾಡಲು ನೀತಿ ಸಂಹಿತೆ ಅಡ್ಡಿಯಿರುವುದಿಲ್ಲ. ಆದರೆ ಪಂಚಾಯಿತಿಗಳು ಯಾವುದೇ ಹೊಸ ಕಾಮಗಾರಿಗಳನ್ನು ನಿರ್ಧರಿಸಲಾಗಿದೆ ಎಂಬ ಕಾರಣ ನೀಡಿ ಪ್ರಾರಂಭಿಸುವಂತಿಲ್ಲ.
ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಹಾಗೂ ಎಪಿಎಂಸಿ ಅಧ್ಯಕ್ಷರಿಗೆ ಒದಗಿಸಲಾಗಿರುವ ಸರ್ಕಾರಿ ವಾಹನಗಳನ್ನು ಚುನಾವಣೆ ಮುಕ್ತಾಯವಾಗುವವರೆಗೆ ಜಿಲ್ಲಾಧಿಕಾರಿಗಳ ವಶದಲ್ಲಿರಿಸಿಕೊಳ್ಳಲಾಗುವುದು.
ಗ್ರಾಮೀಣ ಪ್ರದೇಶದಲ್ಲಿ ಮಂತ್ರಿಗಳು ಅಥವಾ ಶಾಸಕರು ಯಾವುದೇ ಕಾರ್ಯಕ್ರಮವನ್ನು ಆಯೋಜಿಸಿ ಮತದಾರರನ್ನು ಪ್ರಭಾವಿಸುವಂತಹ ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಮತ್ತು ತಾಲ್ಲೂಕು ಮಟ್ಟದಲ್ಲಿ ಸದಾಚಾರ ಸಂಹಿತೆಯನ್ನು ಜಾರಿಗೊಳಿಸುವ ಅಧಿಕಾರವು ಜಿಲ್ಲಾಧಿಕಾರಿಗಳವರಿಗೆ ನಿಹಿತವಾಗಿದ್ದು ಸದಾಚಾರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.
ಚುನಾವಣಾ ಅಭ್ಯರ್ಥಿಗಳ ಪ್ರಚಾರದ ಸಂಬಂಧ ಚುನಾವಣೆ ನಡೆಯುವ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಅನಧಿಕೃತ ಪೋಸ್ಟರ್‍ಗಳು, ಬ್ಯಾನರ್‍ಗಳು ಇರದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕ್ರಮವಹಿಸುವುದು.
ಸರ್ಕಾರಿ ವಾಹನಗಳು ದುರುಪಯೋಗವಾಗದಂತೆ, ತಾಲ್ಲೂಕು ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ / ತಾಲ್ಲೂಕು ಮಟ್ಟದ ಅಧಿಕಾರಿಗಳು ಸರ್ಕಾರಿ / ಅರೆಸರ್ಕಾರಿ ಕಚೇರಿ, ಬೋರ್ಡುಗಳು / ಎ.ಪಿ.ಎಂ.ಸಿ ಮುಂತಾದ ಕಚೇರಿ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್.ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

