ದೊಡ್ಡಬಳ್ಳಾಪುರ: ಮಾರಾಠ ಸಮುದಾಯ ನಿಗಮ ರಚನೆ ಖಂಡಿಸಿ ಡಿ.5 ರಂದು ಕರೆ ನೀಡಿರುವ ಕರ್ನಾಟಕ ಬಂದ್ಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ನೈತಿಕ ಬೆಂಬಲವನ್ನು ಮಾತ್ರ ನೀಡಿದ್ದು, ಬಲವಂತದ ಬಂದ್ ನಡೆಸಲು ಮುಂದಾದಲ್ಲಿ ನಮ್ಮ ಸಂಘಟನೆಯ ಬೆಂಬಲವಿಲ್ಲವೆಂದು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ ತಿಳಿಸಿದ್ದಾರೆ.
ಈ ಕುರಿತು ಹರಿತಲೇಖನಿ ಜೊತೆ ಮಾತನಾಡಿರುವ ಅವರು, ನಮ್ಮ ಸಂಘಟನೆಯ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಡಿ.5ರ ಕರ್ನಾಟಕ ಬಂದ್ ಕುರಿತು ಚರ್ಚೆ ನಡೆಸಲಾಗಿದ್ದು, ಇತ್ತೀಚಿನ ಬೆಳವಣಿಗೆಯನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿರುವುದರಿಂದ ಬಂದ್ ತೀರ್ಮಾನವನ್ನು ರಾಜ್ಯದ ಜನತೆಗೆ ನೀಡಲಾಗಿದೆ. ಅದರನ್ವಯ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ಕರ್ನಾಟಕ ಬಂದ್ ಕರೆಗೆ ನಮ್ಮ ಬೆಂಬಲವಿಲ್ಲ. ಆದರೆ, ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ಸರ್ಕಾರದ ನಿರ್ಧಾರದ ವಿರುದ್ಧ ನಾವು ಹೋರಾಟ ಮಾಡುತ್ತೇವೆ.
ಈಗಾಗಲೇ ದೊಡ್ಡಬಳ್ಳಾಪುರ ತಾಲೂಕು ಕನ್ನಡ ಪರ ಸಂಘಟನೆಗಳ ಒಕ್ಕೂಟ ಬಲವಂತದ ಬಂದ್ ಇಲ್ಲವೆಂದು ಘೋಷಣೆ ಮಾಡಿರುವುದರಿಂದ, ಅಂದು ನಡೆಯುವ ಪ್ರತಿಭಟನೆಯಲ್ಲಿ ನಮ್ಮ ಸಂಘಟನೆ ಭಾಗವಹಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕ್ಷಣ ಕ್ಷಣದ ತಾಜಾ ಸುದ್ದಿ, ಮಾಹಿತಿಗಾಗಿ Harithalekhaniಯನ್ನು Facebook / Twitterಗಳಲ್ಲಿ ಫಾಲೋ ಮಾಡಿ.

