ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಮತ್ತು ಕೋವಿಡ್-19 ಕಾರಣದಿಂದಾಗಿ ಕಾಮಗಾರಿಗಳನ್ನು ಅಪೂರ್ಣಗೊಳಿಸದೆ, 2020-21ನೇ ಸಾಲಿನ ಅನುದಾನವನ್ನು ಫೆಬ್ರುವರಿ 28ರೊಳಗೆ ಸಮರ್ಥವಾಗಿ ಬಳಸಿಕೊಳ್ಳುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಲವಾರು ಇಲಾಖೆಗಳಲ್ಲಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ನೇರವಾಗಿ ಭೇಟಿ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ವಿನಾಕಾರಣ ಕಾಮಗಾರಿಗಳು ವಿಳಂಬವಾಗಿ, ಅನುದಾನ ವಾಪಸ್ ಆದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಶೀಘ್ರವೇ ಕರೊನಾ ವ್ಯಾಧಿ ದೂರವಾಗಲಿದ್ದು, 2020-21ನೇ ಸಾಲಿನ ಆಯವ್ಯಯದಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮೀಸಲಿರಿಸಿರುವ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರಲ್ಲದೆ, ಅನುದಾನವು ಪೂರ್ಣ ಬಳಕೆಯಾಗದಿದ್ದಲ್ಲಿ ಜಿಲ್ಲಾ ಪಂಚಾಯಿತಿಗೆ ಸೂಕ್ತ ಕಾರಣ ನೀಡಿ, ಲಿಖಿತ ಪತ್ರ ಸಲ್ಲಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಕೆ.ಕರಿಯಪ್ಪ ಮಾತನಾಡಿ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಇಲಾಖೆಗಳಿಗೆ ಸಂದಾಯವಾಗಿರುವ ಅನುದಾನವನ್ನು ಸರಿಯಾದ ಸಮಯದೊಳಗೆ ಖರ್ಚು ಮಾಡುವ ಮುಖೇನ ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಬೇಕು. ಎಂದರಲ್ಲದೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅಕ್ಷರ ದಾಸೋಹ ಸೇರಿದಂತೆ ವಿವಿಧ ಇಲಾಖೆಗಳು ಹೆಚ್ಚು ಅನುದಾನ ಉಳಿಸಿಕೊಂಡಿದ್ದು, ಶೀಘ್ರವೇ ಅನುಮೋದನೆ ಪಡೆದು ಅನುದಾನದಡಿ ಪೂರ್ಣಗೊಳ್ಳಬೇಕಿರುವ ಕಾಮಗಾರಿಗಳನ್ನು ಕಾರ್ಯಗತಗೊಳಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ವಿನುತಾ ರಾಣಿ, ಮುಖ್ಯ ಲೆಕ್ಕಾಧಿಕಾರಿ ಡಾ. ರಮೇಶ್ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ / ಜಾಹಿರಾತಿಗಾಗಿ 7019780535 ಸಂಖ್ಯೆಗೆ ಸಂಪರ್ಕಿಸಿ

