RTI……ಹೀಗಂದೊಡನೆ ಸರ್ಕಾರಿ ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ಒಮ್ಮೆ ಭಯದ ಢವ ಢವ ಶುರುವಾಗಿ ಬೆವರಿಳಿದುಬಿಡುತ್ತದೆ. 2005 ರ ಅಕ್ಟೋಬರ್‌ನಲ್ಲಿ ಅಂದಿನ ಯುಪಿಎ ಸರ್ಕಾರವು ಕೈಗೊಂಡ ಅತ್ಯಂತ ಪ್ರಶಂಸನೀಯ ಹಾಗೂ ಮಹತ್ತರವಾದ ಕಾಯಿದೆಯೇ ಮಾಹಿತಿ ಹಕ್ಕು ಕಾಯಿದೆ / Right To Information (RTI).
ಬಹುಶಃ ಇಂದಿಗೂ ಯುಪಿಎ ಬಗ್ಗೆ ಅದರ ವಿರೋಧಿಗಳೂ ಸಹ ಮೆಚ್ಚಲು ಇರುವ ಹಲವು ಕಾರಣಗಳಲ್ಲಿ ಈ ಮಾಹಿತಿ ಹಕ್ಕು ಕಾಯಿದೆಯ ಅನುಷ್ಠಾನ ಎಂಬುದು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. ಯಾಕೆಂದರೆ, 2005 ಕ್ಕೂ ಮುಂಚೆ ಭಾರತದ ಕೇಂದ್ರ ಹಾಗೂ ಯಾವುದೇ ರಾಜ್ಯ ಸರ್ಕಾರಗಳ ಒಂದಿಂಚೂ ಮಾಹಿತಿ ಜನಸಾಮಾನ್ಯರಿಗೆ ತಿಳಿಯಲಾಗುತ್ತಿರಲಿಲ್ಲ.
2005 ರ ಅಕ್ಟೋಬರ್ ನಲ್ಲಿ ಅಂದಿನ ಕೇಂದ್ರದ ಯುಪಿಎ ಸರ್ಕಾರವು ಮಾಹಿತಿ ಹಕ್ಕು ಕಾಯಿದೆ ಜಾರಿಗೆ ತಂದ ನಂತರ ಶಾಸಕಾಂಗ ಹಾಗೂ ಕಾರ್ಯಾಂಗ ಸಂಪೂರ್ಣವಾಗಿ ಮತ್ತು ನ್ಯಾಯಾಂಗ ಭಾಗಶಃ ಈ ಕಾಯಿದೆ ವ್ಯಾಪ್ತಿಯಲ್ಲಿ ಸೇರಿತು. ತದ ನಂತರದಲ್ಲಿ ಅಂದಿನ ಕೇಂದ್ರ ಯುಪಿಎ ಸರ್ಕಾರದ ಹಲವಾರು ಬ್ರಹ್ಮಾಂಡ ಭ್ರಷ್ಟಾಚಾರಗಳು ಇದೇ RTI ಅಡಿಯಲ್ಲಿ ಒಂದೊಂದಾಗಿ ಬಹಿರಂಗಗೊಳ್ಳತೊಡಗಿದವು. ಅದೇ ಸಮಯಕ್ಕೆ ಭಾರತದ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಮಿಂಚಿನ ಕ್ರಾಂತಿಯ ಅಲೆಗಳೆದ್ದು ದೈನಂದಿನ ಚರ್ಚಾ ಕಾರ್ಯಕ್ರಮಗಳನ್ನು ಒಳಗೊಂಡ ಅನೇಕಾನೇಕ ವಾಹಿನಿಗಳು ಶುರುವಾದವು. ಇದೊಂತರ ಸುದ್ದಿಗಳ ಬೆಂಕಿಗೆ ಚಾನಲ್‌ಗಳ ಬಿರುಗಾಳಿ ಸೇರಿ ದೇಶಾದ್ಯಂತ ಕೇಂದ್ರ ಸರ್ಕಾರದ ಭ್ರಷ್ಟಾಚಾರದ ಪ್ರಕರಣಗಳ ಕಾಳ್ಗಿಚ್ಚು ಮನೆಮನೆಗೂ ಹರಡಿತು. ಒಂದು ರೀತಿಯಲ್ಲಿ ಯುಪಿಎ ಸರ್ಕಾರ ತಾನೇ ತೋಡಿದ ಹಳ್ಳಕ್ಕೆ ತಾನೇ ಬಿದ್ದಿತ್ತು. ಅದೇನಾದರೂ ಆಗಲಿ, ಯುಪಿಎ ಸರ್ಕಾರ ತಂದ ( ಈ ಕಾಯಿದೆಯ ಪ್ರಸ್ತಾವನೆ ಹಿಂದಿನ ವಾಜಪೇಯಿಯವರ ಸರ್ಕಾರದ್ದಾದರೂ ಅನುಷ್ಠಾನಕ್ಕೆ ತಂದಿದ್ದು ಮಾತ್ರ 2005 ರಲ್ಲಿ ಅಸ್ತಿತ್ವದಲ್ಲಿದ್ದ ಯುಪಿಎ ಸರ್ಕಾರ) ಈ RTI ಕಾಯಿದೆ ಎಂಬುದು ನಿಜಕ್ಕೂ ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಕ್ರಾಂತಿಕಾರಿ ನಿರ್ಧಾರವೆಂದೇ ಬಣ್ಣಿಸಲ್ಪಟ್ಟಿದೆ. ಆ ಕಾರಣಕ್ಕಾಗಿ ನಾವು ಅಂದಿನ ಯುಪಿಎ ಸರ್ಕಾರವನ್ನು ಶ್ಲಾಘಿಸಲೇಬೇಕು. ಇಂತಹ ಉಪಯೋಗಿ ಕಾಯಿದೆಯು ಇತ್ತೀಚಿನ ದಿನಗಳಲ್ಲಿ ದುರುಪಯೋಗವಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಯಾಕೆಂದರೆ, “ಬಹುತೇಕ” ಮಾಹಿತಿ ಹಕ್ಕು ಅರ್ಜಿಗಳು ಸರ್ಕಾರಿ ಅಧಿಕಾರಿಗಳನ್ನು ಹಾಗೂ ರಾಜಕಾರಣಿಗಳನ್ನು ಹೆದರಿಸಲೋ, ಹಣ ಪೀಕಲೋ, ಅಥವಾ ಸ್ವಹಿತಾಸಕ್ತಿ ಸಾಧಿಸಲೋಸುಗವಾಗಿಯೋ ದಾಖಲಾಗುತ್ತಿವೆ ಎಂಬುದು ಬೆತ್ತಲೆ ಸತ್ಯ.
ಇದನ್ನು ಪುಷ್ಟೀಕರಿಸುವ ಹಲವಾರು ಪ್ರಕರಣಗಳು ಆಗಿಂದಾಗ್ಗೆ ನಡೆಯುತ್ತಿರುತ್ತವೆ. ಯಾರೋ ಮಾಡಿದ ತಪ್ಪುಗಳಿಗೆ ಇನ್ಯಾರದ್ದೋ ತಲೆದಂಡವಾಗಿರುವ ಉದಾಹರಣೆಗಳೂ ನಮ್ಮ ಕಣ್ಣ ಮುಂದಿವೆ. ಇದನ್ನೆಲ್ಲಾ ಮನಗಂಡ ಮಾಹಿತಿ ಹಕ್ಕು ಆಯೋಗವು ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ಸಲುವಾಗಿ ಹಲವಾರು ಕಠಿಣ ನಿಯಮಗಳನ್ನು ತಂದರೂ ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಾಗಲಿಲ್ಲ. ಪ್ರಸ್ತುತ ಅನೇಕ ಮಾಹಿತಿ ಹಕ್ಕು ಕಾರ್ಯಕರ್ತರು ಹುಟ್ಟಿಕೊಂಡಿದ್ದಾರೆ. ಅವರೆಲ್ಲರೂ ‘ಕೇವಲ ಮಾಹಿತಿಗಾಗಿ ಅರ್ಜಿ’ ಹಾಕ್ತಾರೆ ಅಂದುಕೊಂಡರೆ ಅದು ನಮ್ಮ ಭ್ರಮೆ. ಕೆಲವು ಹಣಬಾಕರು, ಸೌಲಭ್ಯಬಾಕರು ಮಾಹಿತಿ ಹಕ್ಕು ಕಾಯಿದೆಯನ್ನು ದುರುಪಯೋಗ ಮಾಡಿಕೊಂಡು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಭ್ರಷ್ಟಾಚಾರಿಗಳನ್ನು ಬಯಲಿಗೆಳೆಯುವ ಸಲುವಾಗಿ ಪ್ರಾಣ ಪಣಕ್ಕಿಟ್ಟು ಕಾನೂನಾತ್ಮಕ ಹೋರಾಟ ನಡೆಸುವ ಅಸಲಿ ನ್ಯಾಯಯುತ ಮಾಹಿತಿ ಹಕ್ಕು ಕಾರ್ಯಕರ್ತರನ್ನು ಬೆಂಬಲಿಸುತ್ತಾ ,,, ಇನ್ನು ಮುಂದೆಯಾದರೂ ಮಾಹಿತಿ ಹಕ್ಕು ಕಾಯಿದೆಯು ಭ್ರಷ್ಟಾಚಾರದ ಮುಖವಾಡ ಕಳಚಲು ಮಾತ್ರ ಬಳಕೆಯಾಗಲಿ ಹಾಗೂ ಈ ನಿಟ್ಟಿನಲ್ಲಿ ಮಾಹಿತಿ ಹಕ್ಕು ಆಯೋಗವು ಕಾಯಿದೆಯನ್ನು ಮಾರ್ಪಾಡು ಮಾಡಿ ಕಠಿಣ ನಿಯಮಗಳನ್ನು ತರಲಿ ಎಂದು ಆಶಿಸುತ್ತಾ….
ಇಂತಿ ನಿಮ್ಮವ ಜಿ.ಎನ್.ಪ್ರದೀಪ್
ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

