ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಅಂದರೆ 1.ಮೇ.2022ರಲ್ಲಿ ಕೆ.ಎಸ್.ಆರ್.ಟಿ.ಸಿ. (KSRTC) ನಿಗಮದ ಎಲ್ಲಾ ವಿಭಾಗಗಳ ವ್ಯಾಪ್ತಿಯಲ್ಲಿ ಕಾರ್ಮಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗಿತ್ತು.
ಬೆಂಗಳೂರು ಕೇಂದ್ರಿಯ ವಿಭಾಗದಲ್ಲಿ ಘಟಕ 2 ರಲ್ಲಿ ಅಂದಿನ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ನೌಕರರೊಂದಿಗೆ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಾರಿಗೆ ಸಚಿವರು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಹಾಗೂ ಸಮಸ್ತ ನಿಗಮದ ವತಿಯಿಂದ ಕಾರ್ಮಿಕರುಗಳಿಗೆ ವ್ಯವಸ್ಥಾಪಕ ನಿರ್ದೇಶಕರು ಶುಭಾಶಯಗಳನ್ನು ಸಲ್ಲಿಸಿದ್ದರು.
ಆ ವೇಳೆ KSRTC ನಿಗಮದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ 7200 ನೌಕರರ ಶಿಸ್ತು ಪ್ರಕರಣಗಳನ್ನು ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ಮನ್ನಾ ಮಾಡಲಾಗಿತ್ತು.
ಹತ್ತು ತಿಂಗಳುಗಳ ಅವಧಿಗಿಂತ ಕಡಿಮೆ ಅವಧಿಯ ಒಳಗಿನ ಗೈರುಹಾಜರಿಯನ್ನು ಮನ್ನಿಸಿ ಕೂಡಲೇ ಕರ್ತವ್ಯಕ್ಕೆ ಹಾಜರಾಗುವ ನೌಕರರ ವಿಚಾರಣೆಯನ್ನು ರದ್ದುಗೊಳಿಸಿ , ಬಸ್ಸನ್ನು ನೀಡಿ ಚಾಲನೆಗೆ ಅನುವು ಮಾಡಿಕೊಡಲಾಗಿತ್ತು. ಅದರಂತೆ ಗೈರುಹಾಜರಾಗಿದ್ದ 110 ನೌಕರರು ಕರ್ತವ್ಯ ಹಾಜರಾಗಿದ್ದರು.
ನಿಗಮದ ಸಮಸ್ತ ಸಿಬ್ಬಂದಿಗಳು 35000, ಅದರಲ್ಲಿ ಒಟ್ಟು 8414 ಶಿಸ್ತ ಪ್ರಕರಣಗಳಿದ್ದು, 7200 ಶಿಸ್ತು ಪ್ರಕರಣಗಳನ್ನು ಅತೀ ಕಡಿಮೆ ಮೊತ್ತ ದಂಡ ಅಂದರೆ, ರೂ100, ರೂ 200, ಗರಿಷ್ಠ ರೂ500 ಅನ್ನು ವಿಧಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿತ್ತು. ಈ ಪ್ರಕರಣಗಳಿಗೆ ಕನಿಷ್ಠವೆಂದರೆ ರೂ.25000 ದಂಡ ವಿಧಿಸಬಹುದಾದ ಪ್ರಕರಣಗಳು.
ವ್ಯವಸ್ಥಾಪಕ ನಿರ್ದೇಶಕರು, ಶಿಸ್ತು ಪ್ರಕರಣಗಳನ್ನು ಮುಕ್ತಾಯಗೊಂಡಿರುವ ನೌಕರರಿಗೆ ಆದೇಶದ ಪ್ರತಿಯನ್ನು ಸಿಹಿಯೊಂದಿಗೆ ವಿತರಿಸಿ ಶುಭ ಕೋರಿದ್ದರು.
ಅಂದಿನ ವ್ಯವಸ್ಥಾಪಕ ನಿರ್ದೇಶಕರು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ, ಕಾರ್ಮಿಕ ದಿನಾಚರಣೆಯ ಇತಿಹಾಸ, ಸಿದ್ಧಾಂತ ,ವಿಶೇಷತೆ ಕುರಿತು ವಿವರಿಸಿ , ನಮ್ಮ ಸಾರಿಗೆ ಸಂಸ್ಥೆಯ ಬೆನ್ನುಲುಬು ನಮ್ಮ ಕಾರ್ಮಿಕರು ಅವರ ಕ್ಷೇಮ ಲಾಭವೇ ನಮ್ಮ ಪ್ರಮುಖ ಆದ್ಯತೆಯಾಗಿರಬೇಕು.
ನಮ್ಮ ಸಂಸ್ಥೆ ನಡೆಯುತ್ತಿರುವುದು ಚಾಲಕ,ನಿರ್ವಾಹಕ ,ತಾಂತ್ರಿಕ ಸಿಬ್ಬಂದಿಗಳಿಂದನೇ ಹೊರತು ವ್ಯವಸ್ಥಾಪಕ ನಿರ್ದೇಶಕರಿಂದಲ್ಲ. ವ್ಯವಸ್ಥಾಪಕ ನಿರ್ದೇಶಕರು ಬಸ್ಸನ್ನು ಚಾಲನೆ ಮಾಡಲು ಸಾಧ್ಯವಿಲ್ಲ. ಅಧಿಕಾರಿ / ನೌಕರರ ಬಾಂಧವ್ಯ ಚೆನ್ನಾಗಿದ್ದರೆ ಮಾತ್ರ ಸಂಸ್ಥೆ ಚೆನ್ನಾಗಿರುತ್ತದೆ.
ಆಡಳಿತ ವರ್ಗ ಅಂದರೆ ಶಿಕ್ಷೆ ಕೊಡುವುದು ಮಾತ್ರವಲ್ಲ, ನೌಕರರ ಶ್ರೇಯೋಭಿವೃದ್ದಿಯಾಗಿ ದುಡಿಯುವುದು ಕೂಡ ನಮ್ಮ ಕರ್ತವ್ಯವಾಗಿರಬೇಕು. ಆದರೆ ನೌಕರರು ಮತ್ತೊಮ್ಮೆ ಅಪರಾಧ/ ಅಪಘಾತ/ ಗೈರು ಹಾಜರಿ ಪ್ರಕರಣಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆಯನ್ನು ಸಹ ನೀಡಿದ್ದರು.
ಮುಂದುವರೆದು, ಮಾತನಾಡುತ್ತಾ, ನಮ್ಮ ನೌಕರರು ಸಹ ನಮ್ಮ ಸಾರಿಗೆ ಸೇವೆಯನ್ನು ಬಲಪಡಿಸಿ, ಉತ್ತಮ ಸೇವೆಯನ್ನು ಸಾರ್ವಜನಿಕರಿಗೆ ನೀಡಲು ನಮ್ಮೊಡನೆ ಕೈಜೋಡಿಸಬೇಕು, ಆಗ ಮಾತ್ರ ಸಂಸ್ಥೆ ಇನ್ನೂ ಬೆಳವಣಿಗೆ ಕಾಣಲು ಸಾಧ್ಯ ಎಂದು ತಿಳಿಸಿದ್ದರು.
ಇದೇ ಸಂದರ್ಭದಲ್ಲಿ MBBS, M.Tech ಇತರೆ ಹೆಚ್ಚಿನ ವಿದ್ಯಾಭ್ಯಾಸ ಮಾಡಿರುವ ನೌಕರರ ಮಕ್ಕಳನ್ನು ಸನ್ಮಾನಿಸಿ,ಮುಂದೆ ನೀವುಗಳು ಕೂಡ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಈ ಸಂಸ್ಥೆಯನ್ನು ಮುನ್ನಡಸುವ ಶುಭ ಕಾಲ ಬರಲಿ, ಶಿಕ್ಷಣ ಒಂದೇ ಆಯುಧ ಅದನ್ನು ನಮ್ಮ ನೌಕರರು ತಮ್ಮ ಮಕ್ಕಳಿಗೆ ನೀಡಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದ್ದರು.
ವ್ಯವಸ್ಥಾಪಕ ನಿರ್ದೇಶಕರು ನೌಕರರೊಂದಿಗೆ ಉಪಾಹಾರ ಸೇವಿಸಿ, ಕಾರ್ಮಿಕ ದಿನಾಚರಣೆಯ ಅರ್ಥಪೂರ್ಣ ಆಚರಣೆಗೆ ಸಾಥ್ ನೀಡಿದ್ದರು.
ಈ ಸಂದರ್ಭದಲ್ಲಿ ಅಂದಿನ ಮುಖ್ಯ ಯಾಂತ್ರಿಕ ಶಿಲ್ಪಿ, ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾ), ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಇತರರು ಉಪಸ್ಥಿತರಿದ್ದರು.

