ಬೆಂಗಳೂರು: ಗ್ರಾಮಾಂತರ ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕುಗಳಲ್ಲಿ ಹಾಗೂ ಎರಡನೇ ಹಂತದಲ್ಲಿ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲ್ಲೂಕುಗಳಲ್ಲಿ ಅವಧಿ ಮುಕ್ತಾಯವಾಗಿರುವ ಗ್ರಾಮ ಪಂಚಾಯತಿಗಳ ಸದಸ್ಯರುಗಳ ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದ್ದು, ಗ್ರಾಮ ಪಂಚಾಯತಿಗಳ ಚುನಾವಣೆಯನ್ನು ಪಕ್ಷ ರಹಿತವಾಗಿ ನಡೆಸುವುದರಿಂದ ಅಭ್ಯರ್ಥಿಗಳಿಗೆ ಮುಕ್ತ ಚಿಹ್ನೆಗಳನ್ನು ಮಾತ್ರ ಹಂಚಿಕೆ ಮಾಡಲಾಗುತ್ತದೆ.
ಪಕ್ಷರಹಿತ ಚುನಾವಣೆಯನ್ನು ಯಶಸ್ವಿಗೊಳಿಸಲು ರಾಜಕೀಯ ಪಕ್ಷಗಳು ಸಭೆ-ಸಮಾರಂಭಗಳನ್ನು ಏರ್ಪಡಿಸಿ, ವೇದಿಕೆಯ ಮೇಲೆ ಪಕ್ಷದ ಬಾವುಟ, ಬ್ಯಾನರ್‌ಗಳನ್ನು ಬಳಸುವಂತಿಲ್ಲ. ಸ್ಫರ್ಧಿಸುವ ಅಭ್ಯರ್ಥಿಗಳು ತಮ್ಮ ಪಕ್ಷದ ಅಥವಾ ಬೆಂಬಲಿತ ಅಭ್ಯರ್ಥಿ ಎಂದು ಪರಿಚಯಿಸುವುದು ಹಾಗೂ ಅವರ ಪರವಾಗಿ ಮತ ನೀಡಲು ಮತದಾರರನ್ನು ಕೋರುವಂತಿಲ್ಲ.
ಚುನಾವಣೆಗೆ ಸ್ಫರ್ಧಿಸಿರುವ ಅಭ್ಯರ್ಥಿಗಳು, ರಾಜಕೀಯ ಮುಖಂಡರ ಭಾವಚಿತ್ರ ಅಥವಾ ಪಕ್ಷದ ಚಿಹ್ನೆ ಇರುವ ಕರಪತ್ರಗಳನ್ನು ಮುದ್ರಿಸುವುದು ಅಥವಾ ಹಂಚುವುದು ಮಾಡುವಂತಿಲ್ಲ. ರಾಜಕೀಯ ಮುಖಂಡರ ಭಾವಚಿತ್ರ ರಾಜಕೀಯ ಪಕ್ಷಗಳ ಚಿಹ್ನೆ ಇರುವ ಕರಪತ್ರಗಳು, ಕಟೌಟ್‍ಗಳು, ಬ್ಯಾನರ್ ಮತ್ತು ಬಂಟಿಂಗ್‍ಗಳ ಮೂಲಕ ಪ್ರಚಾರ ಮಾಡುವಂತಿಲ್ಲ ಹಾಗೂ ಚುನಾವಣೆಗೆ ಸ್ಫರ್ಧಿಸಿರುವ ಅಭ್ಯರ್ಥಿಗಳು, ಟಿ.ವಿ ಮಾಧ್ಯಮಗಳು, ಪತ್ರಿಕೆಗಳ ಮೂಲಕ ರಾಜಕೀಯ ಮುಖಂಡರ ಭಾವಚಿತ್ರ ಮತ್ತು ಪಕ್ಷಗಳ ಚಿಹ್ನೆಯನ್ನು ಬಳಸಿ ಜಾಹೀರಾತು ನೀಡುವಂತಿಲ್ಲ.
ಇಂತಹ ಪ್ರಕರಣಗಳು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಉಲ್ಲಂಘನೆಯಾಗಿರುವುದು ಕಂಡು ಬಂದಲ್ಲಿ ಅಂತಹ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಂಡು, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್.ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

