ದೊಡ್ಡಬಳ್ಳಾಪುರ: ರೂಪ್ಸ್ ಒಕ್ಕೂಟದ ಕರೆಗೆ ಬೆಂಬಲ ನೀಡದೆ ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯಾದ್ಯಂತ ಕ್ಯಾಮ್ಸ್ ಒಕ್ಕೂಟದ ಖಾಸಗಿ ಶಾಲೆಗಳು ತರಗತಿಗಳನ್ನು ನಡೆಸಲಿವೆ ಎಂದು ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್) ತಾಲೂಕು ಅಧ್ಯಕ್ಷ ಎ.ಸುಬ್ರಹ್ಮಣ್ಯ ಹಾಗೂ ಕಾರ್ಯದರ್ಶಿ ಎಸ್.ಆರ್.ರಮೇಶ್ ಹರಿತಲೇಖನಿಗೆ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಖಾಸಗಿ ಶಾಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿಗಳ ಬೇಡಿಕೆ ಈಡೇರಿಕೆಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ ತಾಲೂಕಿನಲ್ಲಿ ಯಾವುದೇ ಖಾಸಗಿ ಶಾಲೆಗಳು ಬಂದ್ ನಡೆಸದೆ ಆನ್ಲೈನ್ ತರಗತಿ ಮುಂದುವೆರೆಸಿ, ಸರ್ಕಾರದ ಸೂಚನೆಯಂತೆ ಜ.1ರಿಂದ ತರಗತಿಗಳನ್ನು ಆರಂಭಿಸಲಿದೆ ಎಂದರು.
ಡಿ.16ರಂದು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್) ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ರಾಜ್ಯ ಸರ್ಕಾರದ ಸಚಿವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೇಡಿಕೆಗಳನ್ನು ಈಡೇರಿಸಲು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲ್ಲದೆ ಕರೊನಾ ಕಾರಣ ಘೋಷಿಸಲಾದ ಲಾಕ್ಡೌನ್ ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ ಇದನ್ನು ಸರಿದೂಗಿಸುವ ಹೊಣೆಗಾರಿಕೆ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಮೇಲಿರುವುದರಿಂದ ಕ್ಯಾಮ್ಸ್ ಒಕ್ಕೂಟ ಬಂದ್ ಕರೆಗೆ ಬೆಂಬಲ ನೀಡದೆ ತರಗತಿಗಳನ್ನು ಮುಂದುವರೆಸುತ್ತಿದ್ದು, ಪೋಷಕರು ಯಾವುದೇ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

