ದೊಡ್ಡಬಳ್ಳಾಪುರ: ಸಹಕಾರಿ ಕ್ಷೇತ್ರ ಲಾಭದಾಯಕವಾಗಿ ನಡೆಯಲು ಮೊದಲು ನಿರ್ದೇಶಕರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಸಿ.ಡಿ.ಸತ್ಯನಾರಾಯಣಗೌಡ ಹೇಳಿದರು.
ಅವರು ನಗರದಲ್ಲಿ ನಡೆದ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ 2020ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಸರ್ಕಾರಿ ಸಹಕಾರಿ ಕ್ಷೇತ್ರದ ಬ್ಯಾಂಕ್ಗಳಲ್ಲಿ ಕೃಷಿ ಸಾಲ ಮನ್ನಾ ಮಾಡುವಾಗ ಪ್ರಾಥಮಿಕ ಸಹಕಾರಿ ಕೃಷಿ ಬ್ಯಾಂಕಿನಲ್ಲಿ ರೈತರು ಪಡೆದ ಸಾಲವನ್ನು ಮನ್ನಾ ಮಾಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ವಿಎಸ್ಎಸ್ಎನ್ಗಳಲ್ಲಿ ಪಡೆದ ಸಾಲ ಮಾತ್ರ ಮನ್ನಾಮಾಡಲಾಗುತ್ತಿದೆ. ಇದರಿಂದ ಇತರೆ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದ ರೈತರು ಸಾಲ ಮರುಪಾವತಿ ಮಾಡದೆ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಸಹಕಾರಿ ಬ್ಯಾಂಕುಗಳು ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಇಬ್ಬಗೆಯ ನೀತಿ ಸರಿಯಾದ ಕ್ರಮ ಅಲ್ಲ ಎಂದರು.
ಬಿಜೆಪಿ ಮುಖಂಡ ಜೆ.ನರಸಿಂಹಸ್ವಾಮಿ ಮಾತನಾಡಿ, ಕೃಷಿಗೆ ಹೆಚ್ಚಿನ ಸಾಲ ನೀಡುವ ಶಕ್ತಿಯನ್ನು ಸಹಕಾರಿ ಬ್ಯಾಂಕ್ ಬೆಳೆಸಿಕೊಳ್ಳಬೇಕು. ಕೃಷಿಕರಿಗೆ ಇತರೆ ಬ್ಯಾಂಕುಗಳಲ್ಲಿ ಸಾಲ ಪಡೆಯಲು ಸಾಕಷ್ಟು ನಿಯಮಗಳಿವೆ. ಇದರಿಂದಾಗಿ ಸಕಾಲದಲ್ಲಿ ಸಾಲ ಪಡೆಯುವುದು ಕಷ್ಟವಾಗಲಿದೆ. ಉತ್ತಮ ಫಸಲು, ಸೂಕ್ತ ಬೆಲೆ ದೊರೆತರೆ ಎಲ್ಲಾ ರೈತರು ಸಹ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಾರೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಮಾತನಾಡಿ, ಕೋವಿಡ್-19 ನಂತರ ಬ್ಯಾಂಕುಗಳು ಸಾಕಷ್ಟು ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿವೆ. ಸರ್ಕಾರ ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡ ರೈತರು ಸಾಕಷ್ಟು ಸಬ್ಸಿಡಿ ಪಡೆದಿದ್ದಾರೆ. ಬ್ಯಾಂಕು ಶೇ 50 ಸಾಲ ವಸೂಲಾತಿಯ ಗುರಿ ಸಾಧಿಸಿದೆ. ಇದರಿಂದಾಗಿ ರೈತರಿಗೆ ಹೊಸದಾಗಿ ಕೃಷಿ ಸಾಲ ನೀಡಲು ಸಹಕಾರಿಯಾಗಿದೆ ಎಂದರು.
ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಮುನಿಕೃಷ್ಣಪ್ಪ, ಮುಖಂಡರಾದ ಕೆ.ಎಂ.ಹನುಮಂತರಾಯಪ್ಪ, ಬಿ.ಸಿ.ನಾರಾಯಣಸ್ವಾಮಿ, ಟಿ.ಎನ್.ಪ್ರಭುದೇವ್, ಎ.ನರಸಿಂಹಯ್ಯ, ಪಾಪಣ್ಣ, ಹಾಗೂ ಬ್ಯಾಂಕಿನ ನಿರ್ದೇಶಕರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

