ದೊಡ್ಡಬಳ್ಳಾಪುರ: ಕೊವಿಡ್-19 ಸಂಕಷ್ಟದಲ್ಲಿಯೂ ಕೃಷಿ ವಲಯದ ಜಿಡಿಪಿ ಕುಸಿತವಾಗಲಿಲ್ಲ. ಕೃಷಿ ಲಾಭದಾಯಕವಾಗಿದ್ದು, ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡು, ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಿದೆ ಎಂದು ಪ್ರಗತಿಪರ ರೈತ ಮಹಿಳೆ ಮಂಜುಳಾ ತಿಳಿಸಿದರು.
ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ರೈತರ ದಿನಾಚರಣೆ ಹಾಗೂ ಮಣ್ಣು ಆರೋಗ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರೊನಾ ಕಾಲದಲ್ಲಿ ಬಹುತೇಕ ಎಲ್ಲಾ ವ್ಯಾಪಾರಗಳು ನಷ್ಟ ಅನುಭವಿಸಿದವು. ಆದರೆ ಕೃಷಿ ವಲಯ ಮತಾತ್ರ ಸಬಲವಾಗಿತ್ತು. ರೈತರು ಒಂದೇ ರೀತಿಯ ಬೆಳೆ ಬೆಳೆಯದೇ ವಿಭಿನ್ನ ಬೆಳೆಗಳನ್ನು ಬೆಳೆದರೆ, ಒಂದರಲ್ಲಿ ನಷ್ಟವಾದರೂ ಇನ್ನೊಂದು ಲಾಭ ತರುತ್ತದೆ. ಇಂದು ಸಾಪ್ಟ್ ವೇರ್ ಉದ್ಯೋಗಿಗಳು ಸಹ ಕೃಷಿಯಲ್ಲಿ ಆಸಕ್ತಿ ವಹಿಸುತ್ತಿದ್ದಾರೆ. ರೈತರು ಭೂ ತಾಯಿಯನ್ನು ನಂಬಿ ಬದುಕಬೇಕಿದೆ ಎಂದರು.
ಪ್ರಗತಿಪರ ರೈತ ಶ್ರೀನಿವಾಸ ರೆಡ್ಡಿ ಮಾತನಾಡಿ, ಇಂದು ರೈತರು ಹೆಚ್ಚು ನೀರನ್ನು ಬಳಸುತ್ತಿರುವುದರಿಂದ ಅಂತರ್ಜಲ ಬರಿದಾಗುತ್ತಿದೆ. ನೂರಾರು ವರ್ಷಗಳ ನೀರನ್ನು ನಾವು ಖಾಲಿ ಮಾಡುತ್ತಿದ್ದೇವೆ. ಆದರೆ ಹಿಂದಿನ ನಮ್ಮ ಹಿರಿಯರು ಅಗತ್ಯವಿದ್ದಷ್ಟು ಸ್ವಾಭಾವಿಕ ನೀರಿನ ಮೂಲಗಳಿಂದ ಕೃಷಿ ಮಾಡುತ್ತಿದ್ದರು. ಇಂದು ರೈತರು ತಮ್ಮ ಆಹಾರ ತಾವೇ ಬೆಳೆದುಕೊಳ್ಳುವಷ್ಟಾದರೂ ಸ್ವಾವಲಂಬಿಗಳಾಗಬೇಕಿದೆ. ಕೃಷಿಯಲ್ಲಿ ಕೆಲಸವಿದ್ದರೂ ಕಾರ್ಖಾನೆಗಳಿಗೆ ಕೆಲಸಕ್ಕೆ ಸೇರಿ ಕೃಷಿಯಿಂದ ವಿಮುಖರಾಗುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಪ್ರಗತಿಪರ ರೈತ ಮಹಿಳೆ ರತ್ನ ಮಂಜುನಾಥ್ ಮಾತನಾಡಿ, ರೇಷ್ಮ ಕೃಷಿಯಲ್ಲಿ ಹೆಚ್ಚು ಲಾಭವಿದ್ದು, ಹಿಂದಿನ ಪದ್ದತಿಯಂತೆ ಹೆಚ್ಚು ಶ್ರಮವಹಿಸಬೇಕಿಲ್ಲ. 25 ದಿನಗಳಲ್ಲಿ ತಿಂಗಳ ಸಂಬಳದಂತೆ ನಾವು ಹಣ ಗಳಿಸಬಹುದು ಎಂದರು.
ಸಹಾಯಕ ಕೃಷಿ ನಿರ್ದೇಶಕರಾದ ಎನ್.ಸುಶೀಲಮ್ಮ ಮಾತನಾಡಿ, ಕೃಷಿ ಇಲಾಖೆ ವತಿಯಿಂದ ಮಾಜಿ ಪ್ರಧಾನ ಮಂತ್ರಿ ಚೌದರಿ ಚರಣ್ ಸಿಂಗ್ ಅವರ ಹುಟ್ಟು ಹಬ್ಬದ ಅಂಗವಾಗಿ ನಡೆದ ವಿಶ್ವ ರೈತ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಲಾಗುತ್ತಿದ್ದು, ಈ ಬಾರಿ ಈ ಕಾರ್ಯಕ್ರಮದೊಂದಿಗೆ ಮಣ್ಣು ಆರೋಗ್ಯ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ರೈತರು ಕೃಷಿ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು ಸೂಕ್ತ ಮಾಹಿತಿ ಪಡೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕಿನ ಪ್ರಗತಿಪರ ರೈತರಾದ ಅರುಣ್ ಕುಮಾರ್(ಹುಸ್ಕೂರು), ಶ್ರೀನಿವಾಸ ರೆಡ್ಡಿ (ವಡ್ಡರಹಳ್ಳಿ), ಮಂಜುಳ(ಅರಳುಮಲ್ಲಿಗೆ), ನಿತಿನ್(ಗಂಟಿಗಾನಹಳ್ಳಿ), ಮಂಜುನಾಥ್ (ತಳಗವಾರ), ಮಂಜುಳ (ಹುಸ್ಕೂರು)ಅವರನ್ನು ಸನ್ಮಾನಿಸಲಾಯಿತು.
ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ರೂಪಾ, ಕೃಷಿ ಅಧಿಕಾರಿಗಳಾದ ಸಿದ್ದಗಂಗಯ್ಯ, ಹರೀಶ್ ಕುಮಾರ್, ನವೀನ್, ಗೀತಾ, ಕವಿತಾ, ಪ್ರಗತಿಪರ ರೈತರಾದ ಕೃಷ್ಣಮೂರ್ತಿ, ಅಶ್ವತ್ಥಪ್ಪ, ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

