ಬೆಂಗಳೂರು: ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆ, ಡಿಸೆಂಬರ್ 22 ರಂದು ನಡೆದ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕು ಹಾಗೂ ನೆಲಮಂಗಲ ತಾಲ್ಲೂಕು ಸೇರಿದಂತೆ ಒಟ್ಟು ಶೇ. 92.35 ರಷ್ಟು ಮತದಾನವಾಗುವ ಮೂಲಕ ಜಿಲ್ಲಾವಾರು ರಾಜ್ಯದಲ್ಲಿಯೇ ಅತಿಹೆಚ್ಚು ಮತದಾನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದಾಖಲಾಗಿದೆ.
ಎರಡೂ ತಾಲ್ಲೂಕುಗಳಿಂದ ಗುರುತಿಸಲಾದ ಒಟ್ಟು 458 ಮತಗಟ್ಟೆಗಳ ಪೈಕಿ 426 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, 125381 ಪುರುಷ ಮತದಾರರದಲ್ಲಿ 116682 ಪುರುಷರು, 124205 ಮಹಿಳಾ ಮತದಾರರದಲ್ಲಿ 113835 ಮಹಿಳೆಯರು ಹಾಗೂ 29 ಇತರೆ ವರ್ಗದ ಮತದಾರರಲ್ಲಿ 14 ಇತರೆ ವರ್ಗದ ಮತದಾರರು ಮತದಾನ ಮಾಡಿದ್ದು, ಒಟ್ಟಾರೆ 249615 ಮತದಾರರಲ್ಲಿ 230531 ಮತದಾರರು ಮತದಾನ ಚಲಾಯಿಸುವ ಮೂಲಕ ಶೇ.92.35 ರಷ್ಟು ಮತದಾನ ನಡೆದಿದೆ.
ಹೊಸಕೋಟೆ ತಾಲ್ಲೂಕಿನ 26 ಗ್ರಾಮ ಪಂಚಾಯಿತಿಗಳಿಂದ ಗುರುತಿಸಲಾದ ಒಟ್ಟು 257 ಮತಗಟ್ಟೆಗಳ ಪೈಕಿ 241 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ಶೇ.93.34 ರಷ್ಟು ಮತದಾನ ದಾಖಲಾಗಿದೆ.
ನೆಲಮಂಗಲ ತಾಲ್ಲೂಕಿನ 20 ಗ್ರಾಮ ಪಂಚಾಯಿತಿಗಳಿಂದ ಗುರುತಿಸಲಾದ ಒಟ್ಟು 201 ಮತಗಟ್ಟೆಗಳ ಪೈಕಿ 185 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು ಶೇ.91.05 ರಷ್ಟು ಮತದಾನ ದಾಖಲಾಗಿದೆ.
ಕಳೆದ ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ, ವಿಧಾನಸಭಾ ಉಪ ಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಗಳಲ್ಲಿ ರಾಜ್ಯದಲ್ಲೇ ಅತಿಹೆಚ್ಚು ಮತದಾನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದಾಖಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್.ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

