ಬೆಂಗಳೂರು: ರೂಪಾಂತರ ಗೊಂಡ ಕರೊನಾ ವೈರಸ್ ಮುನ್ನೆಚ್ಚರಿಕೆ ಕ್ರಮವಾಗಿ ಘೋಷಿಸಲಾಗಿದ್ದ ರಾತ್ರಿ ಕರ್ಫ್ಯೂವನ್ನು ರಾಜ್ಯ ಸರ್ಕಾರ ಹಿಂಪಡೆಯುವ ಮೂಲಕ ನಗೆ ಪಾಟಿಲಿಗೀಡಾಗಿದೆ.
ರಾತ್ರಿ ಕರ್ಫ್ಯೂ ಹಿಂಪಡೆದಿರುವ ಕುರಿತು ಟ್ವಿಟ್ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬ್ರಿಟನ್ ಮುಂತಾದ ದೇಶಗಳಲ್ಲಿ ಪತ್ತೆಯಾದ ಕೋವಿಡ್ ರೂಪಾಂತರ ವೈರಾಣು ಹರಡುವಿಕೆ ನಿಯಂತ್ರಿಸಲು, ತಜ್ಞರ ಸಲಹೆಯಂತೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲು ತೀರ್ಮಾನಿಸಲಾಗಿತ್ತು. ಸಾರ್ವಜನಿಕ ವಲಯದ ಅಭಿಪ್ರಾಯಗಳನ್ನು ಪರಿಗಣಿಸಿ, ಸಚಿವರುಗಳ ಮತ್ತು ಹಿರಿಯ ಅಧಿಕಾರಿಗಳ ಅಭಿಪ್ರಾಯದ ಮೇರೆಗೆ ರಾತ್ರಿ ಕರ್ಫ್ಯೂವನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ.
ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯನ್ನು ಸರಳವಾಗಿ ಆಚರಿಸಿ, ಸುರಕ್ಷತೆಯ ದೃಷ್ಟಿಯಿಂದ ಹೆಚ್ಚು ಗುಂಪುಗೂಡದಂತೆ ಎಚ್ಚರ ವಹಿಸಬೇಕು. ಸಾರ್ವಜನಿಕರು ಸ್ವಯಂ ನಿರ್ಬಂಧ ವಿಧಿಸಿಕೊಂಡು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.
ಅನಗತ್ಯವಾಗಿ ಸಂಚರಿಸದೆ ಹಾಗೂ ಸರ್ಕಾರ ವಿಧಿಸಿರುವ ಕೋವಿಡ್ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಕೋವಿಡ್ ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಯಲು ಕೋರಿದೆ ಎಂದಿದ್ದಾರೆ.
ನೆನ್ನೆಯಷ್ಟೆ ಬುಧವಾರ ರಾತ್ರಿಯಿಂದ ರಾತ್ರಿ ಕರ್ಫ್ಯೂ ಘೋಷಿಸಿದ್ದ ಸರ್ಕಾರ, ಮತ್ತೆ ಸಂಜೆಯ ವೇಳೆಗೆ ಗುರುವಾರ ರಾತ್ರಿಯಿಂದ ಎಂದಿತ್ತು, ಮತ್ತೆ ಇಂದು ರಾತ್ರಿ ಕರ್ಫ್ಯೂ ಇಲ್ಲವೆನ್ನುವ ಮೂಲಕ ಸಾರ್ವಜನಿಕವಲಯದಲ್ಲಿ ನಗೆಪಾಟಿಲಿಗೀಡಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

