ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ವೆಂಕಟರಮಣಸ್ವಾಮಿ, ರಂಗನಾಥಸ್ವಾಮಿ,ವೇಣುಗೋಪಾಲಸ್ವಾಮಿ ಮೊದಲಾದ ಪ್ರಮುಖ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯ ಅಂಗವಾಗಿ ಸಾವಿರಾರು ಭಕ್ತಾದಿಗಳು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು.
ಈ ಬಾರಿ ಕರೊನಾ ಹಿನ್ನಲೆಯಲ್ಲಿ ದೇವಾಲಯಗಳಲ್ಲಿ ಹೆಚ್ಚು ವಿಜೃಂಭಣೆ ಮಾಡದೇ ಸರಳವಾಗಿ ಆಚರಿಸಲಾಯಿತು. ವೈಕುಂಠ ಏಕಾದಶಿಯಂದು ದೇವರ ದರ್ಶನ ಮಾಡಿದರೆ ಸಾಕ್ಷಾತ್ ವೈಕುಂಠ ದರ್ಶನವೇ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿಂದ ಭಕ್ತಾದಿಗಳು ಉತ್ತರಾಭಿಮುಖದ ವೈಕುಂಠ ದ್ವಾರದ ಮೂಲಕ ಹಾದು ದರ್ಶನ ಪಡೆದರು.
ತೇರಿನಬೀದಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗಿನ ಜಾವದಿಂದಲೇ ನೂರಾರು ಭಕ್ತಾದಿಗಳು ದೇವಾಲಯದ ಮುಂದಿನ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದರು.
ಕೆರೆಬಾಗಿಲು ರಸ್ತೆಯಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರ, ನಗರದ ಕುಚ್ಚಪ್ಪನಪೇಟೆಯಲ್ಲಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ, ಜನಾರ್ಧನ ಸ್ವಾಮಿ ನರಸಿಂಹಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ತಾಲೂಕಿನ ತೂಬಗೆರೆಯ ಪುರಾತನ ಪ್ರಸಿದ್ದ ಶ್ರೀ ಪ್ರಸನ್ನ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಡ್ಡರಹಳ್ಳಿಯ ಶ್ರೀ ತಿರುಮಲ ದೇವರ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

