ಬೆಂಗಳೂರು: ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ವಾಸವಾಗಿರುವ ಶ್ರವಣದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರವನ್ನು ವಿತರಿಸಲು ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಅರ್ಜಿ ನಮೂನೆಗಾಗಿ ತಮ್ಮ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯೂ, ತಾಲ್ಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯೂ ಹಾಗೂ ಜಿಲ್ಲಾ ಕಚೇರಿಯಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ 2021ರ ಜನವರಿ 15 ರೊಳಗೆ ಸಲ್ಲಿಸುವುದು.
ಅರ್ಹತೆಗಳು: ಶ್ರವಣದೋಷವುಳ್ಳ ವ್ಯಕ್ತಿಯು ಭಾರತದ ಪ್ರಜೆಯಾಗಿರಬೇಕು ಹಾಗೂ ಕರ್ನಾಟಕದಲ್ಲಿ ಕನಿಷ್ಠ ಹಿಂದಿನ ಹತ್ತು ವರ್ಷಗಳ ವಾಸಿಯಾಗಿರಬೇಕು. ಕನಿಷ್ಠ ಎಸ್.ಎಸ್.ಎಲ್. ಸಿ. ವರೆಗೆ ವ್ಯಾಸಂಗ ಮಾಡಿರಬೇಕು ಹಾಗೂ ವೃತ್ತಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರ ಸಲ್ಲಿಸಬೇಕು. ಯೋಜನೆಯ ಸೌಲಭ್ಯ ಪಡೆಯಲು ಯಾವುದೇ ಆದಾಯ ಮಿತಿ ಇರುವುದಿಲ್ಲ.
ಈ ಯೋಜನೆಯಡಿ ಸೌಲಭ್ಯ ಪಡೆಯುವ ಶ್ರವಣದೋಷವುಳ್ಳ ಫಲಾನುಭವಿಗಳು ಬೇರೆ ಯಾವುದೇ ಮೂಲಗಳಿಂದ ಇದೇ ರೀತಿಯ ಸೌಲಭ್ಯ ಪಡೆದಿರಬಾರದು ಹಾಗೂ ಈ ಬಗ್ಗೆ ನೋಟರಿಯಿಂದ ದೃಢೀಕರಿಸಿದ ಪ್ರಮಾಣಪತ್ರ ಒದಗಿಸತಕ್ಕದ್ದು. ಕಡ್ಡಾಯವಾಗಿ ಸಂಬಂಧಪಟ್ಟವರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರ ನೀಡುವುದು. ಈ ಯೋಜನೆಯಡಿ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸೌಲಭ್ಯ ನೀಡಲಾಗುವುದು. ಸೌಲಭ್ಯ ಪಡೆದ ನಂತರ ಬೇರೆಯವರಿಗೆ ಹಸ್ತಾಂತರಿಸಬಾರದು ಅಥವಾ ಪರಭಾರೆ ಮಾಡಬಾರದು.
ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯಿತಿಯ ವಿ.ಆರ್.ಡಬ್ಲ್ಯೂ ಅಥವಾ ತಾಲ್ಲೂಕು ಪಂಚಾಯಿತಿಯ ಎಂ.ಆರ್.ಡಬ್ಲ್ಯೂ ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ: 03, ನೆಲಮಹಡಿ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ವಿಕಲಚೇತನರ ಸಹಾಯವಾಣಿ: 080-29787441 ಅನ್ನು ಸಂಪರ್ಕಿಸಬಹುದಾಗಿದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

