ಇವತ್ತು ಕರ್ನಾಟಕದ ಎರಡನೇ ಹಂತದ “ಗ್ರಾಮ ಪಂಚಾಯತಿ ಚುನಾವಣೆ”.
ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ದಿನ ಈ ಚುನಾವಣಾ ದಿನ. ಯಾಕೆಂದರೆ, ಪ್ರಜೆಗಳಾದ ನಾವುಗಳು ಪ್ರಭುಗಳಾಗುವ ಅವಕಾಶ ಸಿಗುವ ಏಕೈಕ ದಿನ ಈ ಚುನಾವಣಾ ದಿನ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮ ಭಾರತ. ಇಂತಹ ಭಾರತವು ಬಹುತೇಕ ಹಳ್ಳಿಗಳ ದೇಶ. ಹಳ್ಳಿಗಳ ಸಾರಥ್ಯ ವಹಿಸುವ ಪಂಚಾಯತಿ ಚುನಾವಣೆ ಇಂದು ನಡೆಯುತ್ತಿದೆ. ಈ ಸುಸಂದರ್ಭದಲ್ಲಿ ಪ್ರಜೆಗಳು ಅಂದರೆ ನಾವುಗಳು ಮೈಮರೆಯದಿರೋಣ. ಪಕ್ಷಗಳನ್ನು ಹೊರತುಪಡಿಸಿ ವೈಯಕ್ತಿಕ ನೆಲೆಗಟ್ಟಿನ ಆಧಾರದ ಮೇಲೆ ನಡೆಯುವ ಚುನಾವಣೆ ಇದಾಗಿದ್ದು, ರಾಜಕೀಯ ಪಕ್ಷಗಳನ್ನು ನೇಪಥ್ಯಕ್ಕೆ ಸರಿಸಿ, ನಮ್ಮ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಒಬ್ಬ ಸಮರ್ಥ ನೇತಾರನನ್ನು ಆರಿಸುವ ಸದಾವಕಾಶ ಇಂದು ಮತ್ತೆ ನಮ್ಮೆದುರಿಗೆ ಬಂದಿದೆ. ಇವತ್ತಿನ ವರ್ತಮಾನದಲ್ಲಿ ಹಣ,ಹೆಂಡದ ಆಮಿಷದ ಆಧಾರದ ಚುನಾವಣೆಯೇ ಜನಮಾನಸದಲ್ಲಿ ಅಚ್ಚೊತ್ತಿಬಿಟ್ಟಿದೆ. ಆದರೆ ಅದೆಲ್ಲಾ ಆಮಿಷಗಳನ್ನೂ ಬದಿಗೆ ಸರಿಸಿ ನಿಸ್ವಾರ್ಥ ಸೇವೆಯ ಪರಮಗುರಿಯೊಂದಿಗೆ ಹಣ,ಹೆಂಡಗಳ ಹಂಗಿಗೆ ಬೀಳದೆಯೇ ಒಬ್ಬ ಸಮರ್ಥನನ್ನು ಆರಿಸುವ ಸದಾವಕಾಶ ಇಂದು ನಮ್ಮದಾಗಿದೆ.
ಹಾಗಾದರೆ ಹಣ,ಹೆಂಡ ಆಮಿಷಗಳಿಲ್ಲದೇ ಈ ಕಾಲದಲ್ಲಿ ಚುನಾವಣೆ ಗೆಲ್ಲಬಹುದೇ?? ಅಥವಾ ಗೆಲ್ಲಲಾಗದೇ?? ಎಂಬ ಎರಡೂ ಪ್ರಶ್ನೆಗಳಿಗೆ ಉತ್ತರ ಹುಡುಕಹೊರಟರೆ ನಮಗೆ ಖಂಡಿತವಾಗಿಯೂ ಸ್ಪಷ್ಟ ಉತ್ತರ ಉದಾಹರಣೆಗಳೊಂದಿಗೆ ಲಭಿಸುತ್ತದೆ.
ಹಣ,ಹೆಂಡ ಹಾಗೂ ಆಮಿಷಗಳಿಲ್ಲದೇ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟವಾದರೂ ಸಹ ಅಸಾಧ್ಯವಾದುದೇನಲ್ಲ ಎಂಬುದನ್ನು ನಾವು ಕೆಲವು ಚುನಾವಣೆಗಳ ಕೆಲವು ಕ್ಷೇತ್ರಗಳ ಫಲಿತಾಂಶಗಳನ್ನು ನೋಡಿದಾಗ ತಿಳಿಯುತ್ತದೆ.
ಹಣ,ಹೆಂಡ,ಆಮಿಷಗಳಿಲ್ಲದೇ ಚುನಾವಣೆ ಗೆಲ್ಲಬಹುದು ಎಂಬುದಕ್ಕೆಪಟೇಲ್, ಶಾಸ್ತ್ರೀಜಿ ಹಾಗೂ ವಾಜಪೇಯಿಯವರಿಂದ ಹಿಡಿದು ಬಿಬಿ ಶಿವಪ್ಪರಾದಿಯಾಗಿ ಇಂದಿನ ಹಾಲಾಡಿ ಶೆಟ್ಟರು,ಉತ್ತರ ಕನ್ನಡದ ಸಂಸದ ಹೆಗಡೆಯವರು, ಕುಡಚಿಯ ರಾಜೀವರು,ಒರಿಸ್ಸಾದ ಬರಿಗಾಲ ಜೋಗಿ ಸಾರಂಗಿ ಯವರೆಗೂ ಯಾರೂ ಸಹ ಯಾವುದೇ ಆಮಿಷಗಳನ್ನು ಮತದಾರರಿಗೆ ಹೇರದೇ ನಿರಂತರವಾಗಿ ಚುನಾವಣೆ ಗೆದ್ದಿರುವುದು ಹಾಗೂ ಗೆಲ್ಲುತ್ತಿರುವುದು ಉದಾಹರಣೆ.
ಹಾಗೆಯೇ ಹಣವೊಂದಿದ್ದ ಮಾತ್ರಕ್ಕೆ ” ಎಲ್ಲಾ ” ಚುನಾವಣೆ ಗೆಲ್ಲಲಾಗುವುದಿಲ್ಲ ಎಂಬ ಪ್ರಶ್ನೆಗೆ ಉತ್ತರ, ನಮ್ಮದೇ ಕರ್ನಾಟಕದ ಗಣಿನಾಡಿನಿಂದ ಹಿಡಿದು, ಚಾಮುಂಡೇಶ್ವರಿ ಕ್ಷೇತ್ರದಾದಿಯಾಗಿ ಪಂಜಾಬ್ ನ ಅಮೃತಸರ, ಉತ್ತರಪ್ರದೇಶದ ಅಮೇಠಿವರೆಗಿನ ಚುನಾವಣಾ ಫಲಿತಾಂಶಗಳು ಉದಾಹರಣೆಗೆ ನಿಲ್ಲುತ್ತವೆ.
ಚುನಾವಣಾ ಸಮಯದಲ್ಲಿ ಆಮಿಷಗಳಿಗಿಂತ ವೈಯಕ್ತಿಕ ವರ್ಚಸ್ಸು, ಅಭಿವೃದ್ಧಿಯ ಆಧಾರದ ಮೇಲೆ ಬಹುತೇಕ ಫಲಿತಾಂಶಗಳು ನಿರ್ಧರಿತವಾಗುತ್ತವೆ. ಆದರೆ ರಾಜಕೀಯದಲ್ಲಿ ಯಾವ ಸಮಯದಲ್ಲಿ ಏನು ಬೇಕಾದರೂ ಘಟಿಸಬಹುದು ಎಂಬಂತೆ ಮೇಲಿನ ಎರಡೂ ಉದಾಹರಣೆಗಳಿಗೆ ಅಪವಾದವೆಂಬಂತೆ, “ಸಂವಿಧಾನ ಶಿಲ್ಪಿಯ ಚುನಾವಣಾ ಸೋಲು ಹಾಗೂ 1984ರ ವಾಜಪೇಯಿಯವರ ಚುನಾವಣಾ ಸೋಲುಗಳು ಇತಿಹಾಸ ಪುಟದಲ್ಲಿ ಕರಾಳ ಗುರುತುಗಳಾಗಿ ಉಳಿದುಕೊಂಡಿವೆ”.
ಹಾಗಾಗಿ, ನಾವು ಇಂದು ಮತ ಚಲಾಯಿಸುವ ಮುನ್ನ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ, ಅಭ್ಯರ್ಥಿಯ ಪೂರ್ವಾಪರವನ್ನೆಲ್ಲ ಅವಲೋಕಿಸಿ, ಅಭ್ಯರ್ಥಿಯ ಗ್ರಾಮದ ಬಗೆಗಿನ ದೂರದೃಷ್ಟಿ ಹಾಗೂ ಗ್ರಾಮದ ಜನತೆಯ ಜೊತೆಗಿನ ಒಡನಾಟ ಹಾಗೂ ನಡವಳಿಕೆಗಳನ್ನು ಅವಲೋಕಿಸಿ ನಮ್ಮ ಮತ ನೀಡುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಿ, ನಮ್ಮ ನಮ್ಮ ಗ್ರಾಮಗಳ ಸಾರಥ್ಯವನ್ನು ಸಮರ್ಥ ವ್ಯಕ್ತಿಯ ಕೈಗೆ ನೀಡುವ ನಿಟ್ಟಿನಲ್ಲಿ ಪ್ರಜಾಪ್ರಭುತ್ವದ ನಿಜವಾದ ಆಶಯವನ್ನು ಸಾಕಾರಗೊಳಿಸಿ ಇವತ್ತು ಒಂದು ದಿನದ ಮಟ್ಟಿಗಾದರೂ ನಾವುಗಳು/ಪ್ರಜೆಗಳು ಪ್ರಭುಗಳಾಗೋಣ ಎಂಬ ಆಶಯದೊಂದಿಗೆ……..ಇಂತಿ ನಿಮ್ಮವ..ಜಿ.ಎನ್.ಪ್ರದೀಪ್
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

