ದೊಡ್ಡಬಳ್ಳಾಪುರ: ತಾಲೂಕಿನ ವಿವಿಧ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ಈ ಬಾರಿ ಕರೊನಾ ಹಿನ್ನಲೆಯಲ್ಲಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆ ನೀತಿ ಸಂಹಿತೆವಕಾರಣದಿಂದಾಗಿ ಗ್ರಾಮೀಣ ಭಾಗಗಳಲ್ಲಿ ಸರಳವಾಗಿ ಆಚರಿಸಲಾಯಿತು.
ಹನುಮ ಜಯಂತಿ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ನಗರದ ನೆಲದಾಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ದೇವಾಲಯದಲ್ಲಿ ಶ್ರೀ ರಾಮತಾರಕ ಹೋಮ, ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳು ನಡೆದವು. ನೆಲದಾಂಜನೇಯ ಸ್ವಾಮಿಗೆ ವಿಶೇಷ ಬೆಳ್ಳಿ ಆಭರಣ, ವಿವಿಧ ಭಕ್ಷ್ಯಗಳ ನೇವೇದ್ಯದ ಸಮೇತ ಅಲಂಕಾರ ಮಾಡಲಾಗಿತ್ತು. ನೆಲದಾಂಜನೇಯ ಸ್ವಾಮಿಯ ಪ್ರಾಕಾರೋತ್ಸವ ಜರುಗಿತು.
ತಾಲೂಕಿನ ರಾಜಘಟ್ಟದ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ಈ ಬಾರಿ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ರಥೋತ್ಸವ ನಡೆಯಲಿಲ್ಲ.ನೂರಾರು ಭಕ್ತಾದಿಗಳು ಶ್ರದ್ದಾ ಭಕ್ತಿಗಳಿಂದ ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು.
ರೋಜಿಪುರದ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ನಾಣ್ಯದ ಅಲಂಕಾರ ಮಾಡಲಾಗಿತ್ತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಆಂಜನೇಯಸ್ವಾಮಿ ಉತ್ಸವ ನಡೆಯಿತು.
ನಾಗರಕೆರೆ ಏರಿಯ ಆಂಜನೇಯಸ್ವಾಮಿ ದೇವಾಲಯ, ರಂಗಪ್ಪ ಸರ್ಕಲ್ ರಾಮಣ್ಣ ಬಾವಿ ಬಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ , ರೇಲ್ವೆ ಸ್ಟೇಷನ್ ಬಳಿಯಿರುವ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ನಗರದ ಹೊರವಲಯದಲ್ಲಿ ದರ್ಗಾಪುರದ ಭಕ್ತಾಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳು ನಡೆದವು.
ತಾಲೂಕಿಗೆ ಸಮೀಪದ ಬನ್ನಿಮಂಗಲದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ತಾಲೂಕಿನ ತಿಮ್ಮಸಂದ್ರದ ಆಂಜನೇಯಸ್ವಾಮಿ ದೇವಾಲಯದಲ್ಲಿ ಆಂಜನೇಯಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು.
ಮಜರಾಹೊಸಹಳ್ಳಿಯ ಆಂಜನೇಯಸ್ವಾಮಿ, ಮಧುರೆ ಕರೆ ಏರಿ ಮೇಲಿನ ಆಂಜನೇಯ ಸ್ವಾಮಿ ಸಿದ್ದೇನಾಯಕನ ಹಳ್ಳಿ, ಅರಳುಮಲ್ಲಿಗೆ ಕೆರೆ ಏರಿ ಅಭಯ ಆಂಜನೇಯಸ್ವಾಮಿ, ಸರ್.ಎಂ.ವಿಶ್ವೇಶ್ವರಯ್ಯ ವೃತ್ತ, ಶಿವಪುರ ಗೇಟ್, ಕೆರೆ ಏರಿ ಆಂಜನೇಯಸ್ವಾಮಿ, ರಾಗಿರಾಯನ ಗುಡ್ಡ ಮೊದಲಾಗಿ ನಗರ ಹಾಗೂ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಆಂಜನೇಯಸ್ವಾಮಿಗೆ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

