ದೊಡ್ಡಬಳ್ಳಾಪುರ: ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕೇಂದ್ರವನ್ನು ಕೊಂಗಾಡಿಯಪ್ಪ ಕಾಲೇಜಿನಲ್ಲಿ ಸ್ಥಾಪನೆ ಮಾಡಿರುವ ಕುರಿತಂತೆ ಸಾರ್ವಜನಿಕ ವಲಯದಿಂದ ತೀವ್ರ ಅಸಮಧಾನ ಕೇಳಿಬಂದಿವೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಹಲವಾರು ಜನ ಆಕ್ರೋಶ ವ್ಯಕ್ತಪಡಿಸಿ ಅಭಿಪ್ರಾಯಗಳನ್ನು ಹಾಕಿದ್ದಾರೆ.
ಇದೇ ಪ್ರಥಮ ಬಾರಿಗೆ ಚುನಾವಣಾ ಕಾರ್ಯಕ್ಕಾಗಿ ಕೊಂಗಾಡಿಯಪ್ಪ ಕಾಲೇಜನ್ನು ಬಳಸಿಕೊಳ್ಳಲಾಗಿದೆ. ಇಲ್ಲಿಯವರೆಗೆ ತಾಲ್ಲೂಕಿನಲ್ಲಿ ಯಾವುದೇ ರೀತಿ ಚುನಾವಣೆಗಳು ನಡೆದರು ಸಹ ಎಣಿಕೆಯಿಂದ ಮೊದಲುಗೊಂಡು ಎಲ್ಲಾ ಕೆಲಸಗಳಿಗು ನಗರದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಬಳಸಿಕೊಳ್ಳಲಾಗುತಿತ್ತು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸುತ್ತ ಸಾಕಷ್ಟು ವಿಶಾಲವಾದ ಮೈದಾನ, ಭಗತ್ಸಿಂಗ್ ಕ್ರೀಡಾಂಗಣ ಸೇರಿದಂತೆ ಕಾಲೇಜಿನ ಸುತ್ತಲು ಸಹ ಸಾಕಷ್ಟು ದೊಡ್ಡದಾದ ರಸ್ತೆಗಳು ಇವೆ. ಮತ ಎಣಿಕೆ ಸಂದರ್ಭದಲ್ಲಿ ಎಷ್ಟು ಸಂಖ್ಯೆಯಲ್ಲಿ ಜನ ಸೇರಿದರು ಸಾರ್ವಜನಿಕ ಸಂಚಾರಕ್ಕು ತೊಂದರೆಯುಂಟಾಗುವುದಿಲ್ಲ. ಅಲ್ಲದೆ ಮತ ಎಣಿಕೆ ಕೇಂದ್ರಕ್ಕೆ ಬಂದು ಹೋಗುವವರಿಗು ಅನುಕೂಲ ಇದೆ. ಕಾಲೇಜಿನ ಒಳಗು ಸಾಕಷ್ಟು ಕೊಠಡಿಗಳು, ವಿದ್ಯುತ್ ಸೌಲಭ್ಯ ಸೇರಿದಂತೆ ಅಗತ್ಯ ಮೂಲಭೂತ ಸೌಭ್ಯಗಳು ಇವೆ. ಹಾಗೆಯೇ ನಗರದ ಹೊರ ಭಾಗದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮತ ಎಣಿಕೆಗೆ ಬಳಸಿಕೊಳ್ಳಬಹುದಾಗಿತ್ತು. ಸರ್ಕಾರಿ ಕಾಲೇಜುಗಳಲ್ಲಿ ಇಷ್ಟೆಲ್ಲಾ ಸೌಲಭ್ಯಗಳು ಇದ್ದರು ಅತ್ಯಂತ ಕಡಿಮೆ ಸ್ಥಳಾವಕಾಶ ಇರುವ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರ ತೆರೆದಿದ್ದು ಸರಿಯಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಇಂದು ನಡೆದ ಕೊಂಗಾಡಿಯಪ್ಪ ಕಾಲೇಜಿನ ಮತ ಎಣಿಕೆ ಕೇಂದ್ರದ ಸುತ್ತಲೂ ಜನವಸತಿ ಇರುವುದರಿಂದ ಸ್ಥಳೀಯ ನಿವಾಸಿಗಳು ಇಂದು ಮನೆಗಳಿಂದ ಹೊರ ಬರಲು ಪರದಾಡುವಂತ ಸ್ಥಿತಿ ಉಂಟಾಗಿತ್ತು.
ಇಸ್ಲಾಂಪುರ, ದೇವರಾಜನಗರ, ಕರೇನಹಳ್ಳಿ, ಚೈತನ್ಯ ನಗರ ಸೇರಿದಂತೆ ಕೊಂಗಾಡಿಯಪ್ಪ ಕಾಲೇಜಿನ ಸುತ್ತಲಿನ ಬಡಾವಣೆಗಳಿಗೆ ಹೋಗುವ ಮುಖ್ಯ ರಸ್ತೆಗಳೆ ಬಂದ್ ಆಗಿದ್ದವು ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

